ಕಾರವಾರ: ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಹಿಂದುಗಳ ಮೇಲೆ ನಡೆದ ಉಗ್ರ ದಾಳಿ ಹಾಗೂ ಮಂಗಳೂರಿನಲ್ಲಿ ಹಿಂದು ಕಾರ್ಯಕರ್ತ ಸುಹಾಸ ಶೆಟ್ಟಿ ಹತ್ಯೆ ಖಂಡಿಸಿ ವಿವಿಧ ಹಿಂದು ಸಂಘಟನೆಗಳು ಕರೆ ನೀಡಿದ್ದ ಕಾರವಾರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬುಧವಾರ ಬೆಳಗಿನಿಂದ ಸಾಯಂಕಾಲದವರೆಗೆ ನಗರದ ಸಂಪೂರ್ಣ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದಾಗಿದ್ದವು, ಆಟೋ ರಿಕ್ಷಾ, ಟೆಂಪೋಗಳ ಸಂಚಾರ ಭಾಗಶಃ ಬಂದಾಗಿತ್ತು. ರಾಜ್ಯ ಸರ್ಕಾರಿ ಸಂಸ್ಥೆಯ ಬಸ್‌ಗಳು, ಸರ್ಕಾರಿ ಕಚೇರಿಗಳು, ಕಾಲೇಜ್, ಶಾಲೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
ಹೋಟೆಲ್‌ಗಳು ಬೆಳಗಿನಿಂದಲೇ ಬಾಗಿಲು ಹಾಕಿದ್ದರಿಂದ ತಮ್ಮ ಊಟೋಪಚಾರಕ್ಕಾಗಿ ಹೋಟೆಲ್ ಅವಲಂಬಿಸಿದ ಹಲವಾರು ಉದ್ಯೋಗಿಗಳು, ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ಚಹಾ ತಿಂಡಿಗಾಗಿ ಹುಡುಕಾಡಿ ಓಡಾಡಬೇಕಾಯಿತು. ಮುಖ್ಯವಾಗಿ ಮೀನು ಮಾರುಕಟ್ಟೆಯನ್ನು ಬಂದ್ ಮಾಡಿ, ಮೀನು ಮಾರಾಟ ಮಹಿಳೆಯರೂ ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಂಡರು. ಕಾರವಾರ ಮಾತ್ರವಲ್ಲದೇ ಸದಾಶಿವಗಡ, ಮಾಜಾಳಿ, ಮುಡಗೇರಿ ಮುಂತಾದ ಕಡೆಯೂ ಅಂಗಡಿ, ಮುಂಗಟ್ಟುಗಳನ್ನು ಸ್ವಯಂಪ್ರೇತಿತವಾಗಿ ಬಂದ್ ಮಾಡಿ ಬಂದ್‌ಗೆ ಬೆಂಬಲ ಸೂಚಿಸಲಾಯಿತು. ರ‍್ಯಾಲಿ:
ಭಜರಂಗದಳ, ಹಿಂದು ಜನಜಾಗೃತಿ ಸಮಿತಿ, ಸನಾತನ ಧರ್ಮ ರಕ್ಷಣಾ ವೇದಿಕೆ ಸೇರಿ ವಿವಿಧ ಸಂಘಟನೆಗಳ ಸುಮಾರು ೨೫೦ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸುಹಾಸ್ ಶೆಟ್ಟಿ ಅಮರ್ ರಹೇ, ಪೆಹಲ್ಗಾಮ್‌ನಲ್ಲಿ ಹಿಂದುಗಳನ್ನು ಕೊಂದ ಉಗ್ರರಿಗೆ ದಿಕ್ಕಾರ ಕೂಗಿದರು. ಪ್ರಧಾನ ಮಂತ್ರಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರ ಮೂಲಕ ಮನವಿ ಸಲ್ಲಿಸಿದರು.
ಸನಾತನ ಧರ್ಮ ರಕ್ಷಣಾ ವೇದಿಕೆಯ ಡಾ.ಗಜೇಂದ್ರ ನಾಯ್ಕ, ಹಿಂದು ಸಂಘಟನೆಗಳ ಮುಖಂಡ ಮಹೇಶ ಹರಿಕಂತ್ರ ಮಾತನಾಡಿದರು. ಹಲವು ಮುಖಂಡರು ಪ್ರತಿಭಟನೆಯಲ್ಲಿದ್ದರು.
ಆರೋಪಿ ಮನೆಯಲ್ಲಿ ಕೋಳಿ ಕಜ್ಜಾಯ ತಿಂದಿರಿ
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಕೀಲ ನಾಗರಾಜ ನಾಯಕ, ಇಂದು ಕಾಶ್ಮೀರ, ಮಂಗಳೂರಿನಲ್ಲಿ ನಡೆದ ದಾಳಿಯನ್ನು ನಾವು ಖಂಡಿಸದೇ ಇದ್ದರೆ ಮುಂದೆ ನಮ್ಮ ಮನೆಯ ಮೇಲೂ ಇವರು ದಾಳಿ ಮಾಡಬಹುದು. ಇದರಿಂದ ಪ್ರತಿಭಟನೆ ಆಯೋಜಿಸಿದ್ದೇವೆ. ಅಂಗಡಿಕಾರರು ಸ್ವಯಂ ಪ್ರೇರಿತವಾಗಿ ತಮ್ಮ ವಹಿವಾಟನ್ನು ಬಂದ್ ಮಾಡಿ ಬೆಂಬಲ ನೀಡಿದ್ದಾರೆ. ಜಿಹಾದಿ ಸಂಸ್ಕೃತಿಯನ್ನು ಮಟ್ಟ ಹಾಕದೇ ಇದ್ದರೆ ನಾವು ಇನ್ನೂ ತೀವ್ರ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.
ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ ಅವರು ಸುಹಾಸ ಶೆಟ್ಟಿ ಅವರ ಮನೆಗೆ ಭೇಟಿ ನೀಡಿಲ್ಲ. ಏಕೆ ಎಂದು ಕೇಳಿದರೆ, `ಸುಹಾಸ ಶೆಟ್ಟಿ ರೌಡಿ ಶೀಟರ್ ಆಗಿದ್ದ. ಅದಕ್ಕೇ ನಾನು ಭೇಟಿ ನೀಡಿಲ್ಲ 'ಎಂದಿದ್ದಾರೆ. ಹಾಗಾದರೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿಗೆ ಇತ್ತೀಚೆಗೆ ಭೇಟಿ ನೀಡಿದಾಗ ನೀವು ಕೋಳಿ ಕಜ್ಜಾಯ ತಿಂದಿದ್ದು, ಸ್ವಾತಂತ್ರ÷್ಯ ಹೋರಾಟಗಾರರ ಮನೆಯಲ್ಲಾ ಎಂದು ಪ್ರಶ್ನಿಸಿದರು. ಇಲ್ಲಿ ಆರೋಪಿಯ ಮನೆಗೆ ಹೋಗಿ ಊಟ ಮಾಡುತ್ತೀರಿ. ಅಲ್ಲಿ ರೌಡಿ ಶೀಟರ್ ಎನ್ನುತ್ತೀರಿ ಇದ್ಯಾವ ನ್ಯಾಯ ಎಂದು ಗೃಹ ಸಚಿವರನ್ನು ಪ್ರಶ್ನಿಸಿದರು.