ಸಿರಿಗೇರಿ: ಸಮೀಪದ ಕರೂರು ಎಪಿಎಂಸಿ ಖರೀದಿ ಕೇಂದ್ರದಲ್ಲಿ ಹಿಂಗಾರು ಹಂಗಾಮಿನ ಜೋಳ ಖರೀದಿಗೆ ಮುಂಗಡವಾಗಿ ಟೋಕನ್ ನೀಡುತ್ತಿದ್ದು, ರೈತರು ಮುಗಿಬಿದ್ದಿದ್ದಾರೆ.
10 ದಿನ ಮುಂಚಿತವಾಗಿ ಜೋಳ ಖರೀದಿ ಕೇಂದ್ರದ ಸಿಬ್ಬಂದಿ ರೈತರಿಗೆ ಟೋಕನ್ ವಿತರಿಸಿದ್ದರು. ಆದರೂ ವಿವಿಧ ಗ್ರಾಮಗಳ ರೈತರು ನೂರಾರು ಸಂಖ್ಯೆಯಲ್ಲಿ ಬಂದಿದ್ದರಿಂದ ನೂಕು ನುಗ್ಗಲು ಉಂಟಾಯಿತು. ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿ ನಿಯಂತ್ರಣಕ್ಕೆ ತಂದ ನಂತರ ಮತ್ತೆ ಖರೀದಿ ಕೇಂದ್ರದಲ್ಲಿ ಟೋಕನ್ ವಿತರಣೆ ಆರಂಭಿಸಲಾಯಿತು.
ಈಗಾಗಲೇ 600 ರಿಂದ 700 ರೈತರಿಗೆ ಟೋಕನ್ ನೀಡಲಾಗಿದ್ದು, ಪ್ರತಿದಿನ 80 ಕ್ವಿಂಟಾಲ್ ಜೋಳ ಖರೀದಿ ಮಾಡಲಾಗುವುದು. ಆದರೆ, ರೈತರು ಸರದಿ ಪ್ರಕಾರ ಬಾರದೇ ಇರುವುದರಿಂದ ಈ ಗೊಂದಲ ಉಂಟಾಗಿದೆ ಎಂದು ಖರೀದಿ ಕೇಂದ್ರದ ರಮೇಶ್ ರೆಡ್ಡಿ ತಿಳಿಸಿದರು.