ವಯನಾಡು ಸಂತ್ರಸ್ತರಿಗಾಗಿ ನಡೆದ ಕಾರುಣ್ಯ ಯಾತ್ರೆಯನ್ನು ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸಿದರು. ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್, ಶಾಸಕ ಸಿ.ಎಚ್ ಕುಞಂಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿಜೋಯ್ ಉಪಸ್ಥಿತರಿದ್ದರು. 
ಜಿಲ್ಲೆ

ವಯನಾಡು ಸಂತ್ರಸ್ತರಿಗಾಗಿ ಕಾರುಣ್ಯ ಯಾತ್ರೆ : ಖಾಸಗಿ ಬಸ್‌ಗಳಲ್ಲಿ ಹಣ ಸಂಗ್ರಹ : ಜನರಿಂದ ಉದಾರ ಕೊಡುಗೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಪ್ರಾಕೃತಿಕ ವಿಕೋಪದಿಂದ 400ಕ್ಕೂ ಹೆಚ್ಚು ಮಂದಿಯನ್ನು ಬಲಿಯಾಗಿರುವ ವಯನಾಡಿನ ಸಂತ್ರಸ್ತರಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯ ಖಾಸಗಿ ಬಸ್ ಮಾಲೀಕರು ಮತ್ತು ಸಿಬ್ಬಂದಿ ಗುರುವಾರ ಜಿಲ್ಲಾದ್ಯಂತ ’ಕಾರುಣ್ಯ ಯಾತ್ರೆ’ ಮೂಲಕ ಹಣ ಸಂಗ್ರಹಿಸಿದರು.

ಸಂಘಟನೆ ರಾಜ್ಯ ಸಮಿತಿ ತೀರ್ಮಾನದಂತೆ ಕಾಸರಗೋಡು ಜಿಲ್ಲೆಯಲ್ಲೂ ಕಾರುಣ್ಯ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಕೆ.ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಉದುಮ ಶಾಸಕ ಸಿ.ಎಚ್.ಕುಞಂಬು, ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್ ಐಎಎಸ್, ನಗರಸಭೆ ಅಧ್ಯಕ್ಷ ಅಬ್ಬಾಸ್ ಬೀಗಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿಜೋಯ್, ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಜಿ ಪ್ರಸಾದ್, ಗಿರಿಕೃಷ್ಣನ್, ಶರೀಫ್ ಕೊಡವಂಜಿ ಮೊದಲಾದವರು ಉಪಸ್ಥಿತರಿದ್ದರು. ತಾಲೂಕು ಕಾರ್ಯದರ್ಶಿ ಸಿ.ಎ.ಮಹಮ್ಮದ್‌ಕುಞಿ ಸ್ವಾಗತಿಸಿ, ವಂದಿಸಿದರು.

ಕಾರುಣ್ಯ ಯಾತ್ರೆ ಅಂಗವಾಗಿ ಬಸ್ ಸಿಬ್ಬಂದಿ ಪ್ರಯಾಣಿಕರಿಂದ ಬಕೆಟ್ ಹಿಡಿದು ಹಣ ಸಂಗ್ರಹಿಸಿದರು.

ಟಿಕೆಟ್ ಇಲ್ಲ, ಬಕೆಟ್‌ನಲ್ಲಿ ಸಂಗ್ರಹ

ವಯನಾಡಿನ ಸಂತ್ರಸ್ತರಿಗಾಗಿ ಖಾಸಗಿ ಬಸ್‌ಗಳು ನಡೆಸಿದ ಕಾರುಣ್ಯ ಯಾತ್ರೆಯಲ್ಲಿ ಪ್ರಯಾಣಿಕರಿಂದ ಇಂದು ಸಂಗ್ರಹಿಸಿದ ಹಣಕ್ಕೆ ಟಿಕೆಟ್ ಇರಲಿಲ್ಲ. ನಿರ್ವಾಹಕರು ಬಕೆಟ್ ಹಿಡಿದು ಸಂತ್ರಸ್ತರಿಗಾಗಿ ಪ್ರಯಾಣಿಕರಿಂದ ಹಣ ಸಂಗ್ರಹಿಸಿದರು. ಟಿಕೆಟ್ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ನೀಡಿ ಪ್ರಯಾಣಿಕರೂ ಸಹಕರಿಸಿದರು.

ಕಾರುಣ್ಯ ಯಾತ್ರೆಯಲ್ಲಿ ಸಂಗ್ರಹವಾಗುವ ಮೊತ್ತದಲ್ಲಿ ಇಂಧನ ತುಂಬಿಸಲು ಮಾತ್ರ ಹಣ ತೆಗೆಯಲಾಗುವುದು. ಸಿಬ್ಬಂದಿಯೂ ಒಂದು ದಿನದ ತಮ್ಮ ವೇತನವನ್ನು ಸಂತ್ರಸ್ತರಿಗಾಗಿ ಮೀಸಲಿಡಲಿದ್ದಾರೆ. ಖಾಸಗಿ ಬಸ್ ಮಾಲೀಕರ ಸಂಘ ಆಯೋಜಿಸಿರುವ ಈ ಕಾರುಣ್ಯ ಯಾತ್ರೆಯಲ್ಲಿ ಸಾರ್ವಜನಿಕರು ನಮ್ಮೊಂದಿಗೆ ಕೈಜೋಡಿಸಿದ್ದಾರೆ. ರಾಜ್ಯ ಸಮಿತಿ ವಯನಾಡು ಸಂತ್ರಸ್ತರಿಗಾಗಿ 25ಮನೆಗಳನ್ನು ನಿರ್ಮಿಸಿಕೊಡುವ ಯೋಜನೆಯಲ್ಲಿ ಜಿಲ್ಲಾ ಸಮಿತಿಯೂ ಕೈಜೋಡಿಸಲಿದೆ ಎಂಬುದಾಗಿ ಸಂಘಟನೆ ಜಿಲ್ಲಾ ಅಧ್ಯಕ್ಷ ಕೆ.ಗಿರೀಶ್ ತಿಳಿಸಿದ್ದಾರೆ.