ಜಿಲ್ಲೆ

ವಯನಾಡಿನ ಸಂತ್ರಸ್ತರಿಗಾಗಿ ಕಾರುಣ್ಯ ಯಾತ್ರೆ : ಖಾಸಗಿ ಬಸ್ ಮಾಲೀಕರಿಂದ ನೆರವು : ಬಕೆಟ್‌ನಲ್ಲಿ ಹಣ ಸಂಗ್ರಹ

ಸೌಮ್ಯ ಆರ್

ಕಾಸರಗೋಡು: ವಯನಾಡಿನ ಸಂತ್ರಸ್ತರಿಗಾಗಿ ಸಹಾಯ ಒದಗಿಸಲು ಕಾಸರಗೋಡು ಜಿಲ್ಲೆಯ ಖಾಸಗಿ ಬಸ್ ಮಾಲೀಕರು ಮುಂದಾಗಿದ್ದಾರೆ. ಇದಕ್ಕಾಗಿ ಆಗಸ್ಟ್ 22ರಂದು ಜಿಲ್ಲೆಯಲ್ಲಿ ಸಂಚಾರ ನಡೆಸುವ ಎಲ್ಲ ಖಾಸಗಿ ಬಸ್‌ಗಳು ‘ಕಾರುಣ್ಯ ಯಾತ್ರೆ’ ಮೂಲಕ ಹಣ ಸಂಗ್ರಹಿಸಿ ವಯನಾಡಿನ ಪುನಃ ನಿರ್ಮಾಣಕ್ಕೆ ನೀಡಲಾಗುವುದು ಎಂದು ಖಾಸಗಿ ಬಸ್ ಮಾಲೀಕರ ಒಕ್ಕೂಟ ಜಿಲ್ಲಾಧ್ಯಕ್ಷ ಕೆ.ಗಿರೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಂಘಟನೆ ರಾಜ್ಯ ಸಮಿತಿ ತೀರ್ಮಾನದಂತೆ ಆ.22ರಂದು ಕಾಸರಗೋಡು ಜಿಲ್ಲೆಯಲ್ಲೂ ಕಾರುಣ್ಯ ಯಾತ್ರೆ ಹಮ್ಮಿಕೊಳ್ಳಲಾಗುವುದು. ಜತೆಗೆ ರಾಜ್ಯ ಸಮಿತಿ ವಯನಾಡಿನ ಸಂತ್ರಸ್ತರಿಗಾಗಿ 25 ಮನೆ ನಿರ್ಮಿಸಿಕೊಡುವ ಯೋಜನೆಯಲ್ಲಿ ಜಿಲ್ಲಾ ಸಮಿತಿಯೂ ಕೈಜೋಡಿಸಲಿದೆ.

ಜಿಲ್ಲೆ ಖಾಸಗಿ ಬಸ್‌ಗಳು ಕಾರುಣ್ಯ ಯಾತ್ರೆ ನಡೆಸುವ 22ನೇ ದಿನಾಂಕ ನೆನಪಿನಲ್ಲಿಟ್ಟುಕೊಂಡು, ಸಾರ್ವಜನಿಕರು ತಮ್ಮ ಸ್ವಂತ ವಾಹನ ಬಳಸದೆ, ಖಾಸಗಿ ಬಸ್‌ನಲ್ಲಿ ಪ್ರಯಾಣಿಸುವಂತೆ ವಿನಂತಿಸಲಾಗುವುದು. ವಯನಾಡಿನ ಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ ಎಲ್ಲ ಜನತೆ ಕೈಜೋಡಿಸುವಂತೆ ಮಾಡಲು ಖಾಸಗಿ ಬಸ್ ಮಾಲೀಕರ ಸಂಘ ಈ ಮೂಲಕ ಅವಕಾಶ ಮಾಡಿಕೊಡಲಿದೆ. ಆ ದಿನ ವಿದ್ಯಾರ್ಥಿಗಳೂ ಕೈಜೋಡಿಸಬೇಕು. ಕಾರುಣ್ಯ ಯಾತ್ರೆಯಂದು ಯಾರಿಗೂ ಟಿಕೆಟ್ ನೀಡದೆ ಬಕೆಟ್‌ನಲ್ಲಿ ಹಣ ಸಂಗ್ರಹಿಸಲಾಗುವುದು. ಟಿಕೆಟ್ ದರಕ್ಕಿಂತ ಹೆಚ್ಚಿನ ಮೊತ್ತ ನೀಡಿ ಸಹಕರಿಸುವಂತೆಯೂ ಸಾರ್ವಜನಿಕರಲ್ಲಿ ಮನವಿ ಮಾಡಲಾಗುವುದು. ಸಂಗ್ರಹವಾಗುವ ಮೊತ್ತದಲ್ಲಿ ಇಂಧನ ತುಂಬಿಸಲು ಮಾತ್ರ ಹಣ ತೆಗೆಯಲಾಗುವುದು. ಸಿಬ್ಬಂದಿಯೂ ಆ ದಿನದ ತಮ್ಮ ವೇತನ ಸಂತ್ರಸ್ತರಿಗಾಗಿ ಮೀಸಲಿಡಲಿದ್ದಾರೆ. ಖಾಸಗಿ ಬಸ್ ಮಾಲೀಕರ ಸಂಘ ಆಯೋಜಿಸಿರುವ ಈ ಕಾರುಣ್ಯ ಯಾತ್ರೆಯಲ್ಲಿ ಸಾರ್ವಜನಿಕರು ಭಾಗಿಗಳಾಗಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಆಗ್ರಹಿಸಿದ್ದಾರೆ.

ಸಂಘಟನೆ ಪ್ರಧಾನ ಕಾರ್ಯದರ್ಶಿ ಟಿ.ಲಕ್ಷ್ಮಣನ್, ಮೊಹಮ್ಮದ್ ಕುಞಿ ಪಿ.ಎ., ಪಿ.ಸುಕುಮಾರನ್, ಸಿ.ಎ.ಮಹಮ್ಮದ್ ಕುಞಿ, ಪ್ರದೀಪ್ ಕುಮಾರ್ ಎ.ವಿ.ಗೋಷ್ಠಿಯಲ್ಲಿದ್ದರು.