ನರಗುಂದ: ಬೌದ್ಧ ಧರ್ಮದ ಮೂಲಕ ವಿಶ್ವಕ್ಕೆ ಜ್ಞಾನ, ಮಾನವೀಯತೆ ಮತ್ತು ಶಾಂತಿ ಸಂದೇಶ ಸಾರಿದ ಬುದ್ಧ ಶುದ್ಧ ಚಾರಿತ್ರ್ಯ ಸಾಕಾರಾಮೂರ್ತಿ. ಆತನ ತತ್ವ ಬೋಧನೆಗಳು ಸಾರ್ವಕಾಲಿಕ. ಬುದ್ಧನ ಚಿಂತನೆಗಳಿಗೆ ಮಾರು ಹೋಗದವರಿಲ್ಲ. ಯಶಸ್ವಿ ಜೀವನಕ್ಕೆ ಎಂಟು ಮಾರ್ಗಗಳನ್ನು ಬೋಧಿಸಿದ ಕರುಣಾ ಮೂರ್ತಿ ಆಗಿದ್ದರು ಎಂದು ಡಾ. ಶಿವಯೋಗಿ ದೇವರು ಹೇಳಿದರು.
ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಚೆಂಬೆಳಕು ಚೆಲ್ಲಿದವರು’ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಬುದ್ಧನ ತತ್ವೋಪದೇಶದ ಕುರಿತು ಅವರು ಮಾತನಾಡಿದರು.
ಅರಸೊತ್ತಿಗೆ ತ್ಯಜಿಸಿ ಬದುಕಿನಲ್ಲಿ ನೆಮ್ಮದಿ ಹಾಗೂ ಶಾಂತಿ ಅರಸಿ ಜನರಿಗೆ ಬದುಕುವ ರೀತಿ ಹಾಗೂ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳ ಬಗ್ಗೆ ತಿಳಿಸಿ ಜಗತ್ತಿಗೆ ಗುರುವಾದ ಗೌತಮ ಬುದ್ಧ ಶ್ರೇಷ್ಠ ಆಧ್ಯಾತ್ಮಿಕ ಪುರುಷ ಎಂದು ಅವರು ಹೇಳಿದರು.
ಸಾಹಿತಿಗಳಾದ ವೀರನಗೌಡ್ರ ಮಾತನಾಡಿ, ಸದಾ ಕನ್ನಡತನ ಮೈಗೂಡಿಸಿಗೊಂಡಿರುವ ಭೈರನಹಟ್ಟಿ ಶ್ರೀಮಠವು ವಿಶಿಷ್ಟ ಹಾಗೂ ವಿನೂತನ ವಿಚಾರಧಾರಗಳೊಂದಿಗೆ ಸಮಾಜದಲ್ಲಿ ಹೊಸ ಕ್ರಾಂತಿ ಮಾಡುತ್ತಿದೆ. ಶ್ರಾವಣ ಮಾಸದಲ್ಲಿ ಒಂದು ತಿಂಗಳ ಪರ್ಯಂತರ 30 ಜನ ಸಮಾಜ ಸುಧಾರಕರ ಜೀವನ ದರ್ಶನ ಉಪನ್ಯಾಸ ಮಾಲಿಕೆಗಳು ಯಶಸ್ವಿಯಾಗಿ ನಡೆಯುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ತಿಳಿಸಿದರು. ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಶಾಂತಲಿಂಗ ಶ್ರೀಗಳು, ನರಗುಂದ ಹಿರೇಮಠದ ಸಿದ್ಧಲಿಂಗ ಶ್ರೀಗಳು, ವಿರಕ್ತಮಠದ ಶಿವಕುಮಾರ ಶ್ರೀಗಳು, ಪತ್ರಿನಮಠದ ಗುರುಸಿದ್ಧವೀರ ಶ್ರೀಗಳು, ಕೊಣ್ಣೂರ ವಿರಕ್ತಮಠದ ಶಿವಕುಮಾರ ಶ್ರೀಗಳು, ಕಲ್ಮಠದ ಶ್ರೀಗಳು, ಶಿರೋಳ ಯಚ್ಚರೇಶ್ವರ ಶ್ರೀಗಳು, ದೇವರಶಿಗಿಹಳ್ಳಿ ಶ್ರೀಗಳು, ಹಿರಿಯ ಚಿಂತಕ ಪ್ರೊ. ಎಸ್.ಎಸ್. ಹರ್ಲಾಪೂರ, ಎಂ.ಜಿ. ಹಿರೇಮಠ, ವೈ. ರಾಘವೇಂದ್ರ ಶೆಟ್ಟಿ, ಡಾ.ಜಿ.ಕೆ. ಭದ್ರಗೌಡ್ರ, ಚೆನ್ನಯ್ಯ ಸಂಗಳಮಠ, ಇತರರು ಉಪಸ್ಥಿತರಿದ್ದರು.
ದಾಸೋಹ ಸೇವೆ ನೆರವೇರಿಸಿದ ಗುಳೇದಗುಡ್ಡದ ನಿವೃತ್ತ ಇಂಜಿನಿಯರ್ ಬಸವರಾಜ ಬಾಚಲಾಪೂರ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು. ಪ್ರೊ. ಆರ್.ಬಿ. ಚಿನಿವಾಲರ, ಪ್ರೊ. ಆರ್.ಕೆ. ಐನಾಪೂರ ಹಾಗೂ ಮಹಾಂತೇಶ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.