ಮೈಸೂರು: ಸರ್ ಸಿ.ವಿ.ರಾಮನ್ ಅವರಿಗೆ ನೋಬೆಲ್ ಪುರಸ್ಕಾರ ತಂದುಕೊಟ್ಟ ಬೆಳಕಿನ ಪರಿಣಾಮಗಳ ಸಂಶೋಧನೆ ಮೊಳಕೆಯೊಡೆದಿದ್ದು ಬೆಂಗಳೂರಿನಲ್ಲಿ ಎನ್ನುವ ಹೆಮ್ಮೆ ಕನ್ನಡಿಗರದ್ದು ಎಂದು ಲೇಖಕ ಬನ್ನೂರು ಕೆ.ರಾಜು ಹೇಳಿದರು.
ನಗರದ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಸಂಸ್ಥೆಯಿಂದ ಹೂಟಗಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಜ್ಞಾನಿಗಳಾದ ಸರ್ ಸಿ.ವಿ.ರಾಮನ್ ಮತ್ತು ಮೇರಿ ಕ್ಯೂರಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತರತ್ನ ಸರ್ ಸಿ.ವಿ.ರಾಮನ್ ಅವರು ಮೂಲತಃ ತಮಿಳುನಾಡಿನವರಾದರೂ ವಿಜ್ಞಾನ ಲೋಕದ ಅವರ ಎಲ್ಲ ರೀತಿಯ ಸಂಶೋಧನೆಗಳಿಗೂ ಕನ್ನಡನಾಡು ಕರ್ಮಭೂಮಿಯಾಗಿತ್ತು. ವಿಶೇಷವಾಗಿ ಅವರಿಗೆ ನೊಬೆಲ್ ಪ್ರಶಸ್ತಿ ತಂದುಕೊಟ್ಟ ಬೆಳಕಿನ ಆವಿಷ್ಕಾರವಾದ ರಾಮನ್ ಎಫೆಕ್ಟ್ ಅಥವಾ ರಾಮನ್ ಪರಿಣಾಮದ ಸಂಶೋಧನೆಗೆ ಮೂಲವೇ ಬೆಂಗಳೂರಾಗಿತ್ತು ಎಂದು ಹೇಳಿದರು.
ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಭೌತಶಾಸ್ತ್ರ ಸಂಘದವರು ಒಮ್ಮೆ ಭೌತವಿಜ್ಞಾನಿ ಸಿ.ವಿ.ರಾಮನ್ ಅವರನ್ನು ಉಪನ್ಯಾಸ ನೀಡಲು ಆಹ್ವಾನಿಸಿದ್ದರು. ಆ ಸಂದರ್ಭದಲ್ಲಿ ರಾಮನ್ ಅವರು ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ಬೆಳಕನ್ನು ಕುರಿತು ತಮ್ಮದೇ ಆದ ಆವಿಷ್ಕಾರದ ಹೊಸ ಸಿದ್ಧಾಂತ ಪ್ರತಿಪಾದಿಸಿದ್ದರು. ಇದೇ ವಿಷಯ ಮುಂದೆ ಬೆಳಕಿನ ಬಗೆಗಿನ ಮಹತ್ವಪೂರ್ಣ ಸಂಶೋಧನೆಯಾಗಿ ‘ರಾಮನ್ ಪರಿಣಾಮ’ ಎಂದು ಹೆಸರಾಗಿ 1930ರಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನವಾಯಿತು ಎಂದು ನೆನೆದರು.
ಮೇರಿ ಕ್ಯೂರಿ ಅವರು ವಿಕಿರಣದ ಅದ್ಭುತ ಸಂಶೋಧನೆಗಳನ್ನು ಮಾಡಿ ಎರಡು ಬಾರಿ ನೊಬೆಲ್ ಪ್ರಶಸ್ತಿಗೆ ಭಾಜನರಾದ ಮೊದಲ ವಿಜ್ಞಾನಿ ಮಾತ್ರವಲ್ಲ, ಶತಮಾನಗಳಿಂದ ಬಂದಿದ್ದ ಹೆಣ್ಣು-ಗಂಡು ಎಂಬ ಲಿಂಗ ತಾರತಮ್ಯದ ಅಡಚಣೆಯ ಗೋಡೆ ಒಡೆದು ಮುಂದೆ ಸಾಗಿದವರು ಎಂದರು.
10ನೇ ತರಗತಿ ವಿದ್ಯಾರ್ಥಿನಿ ಅನುಷಾ, ಮೇರಿ ಕ್ಯೂರಿ ಕುರಿತು ಮಾತನಾಡಿ ಗಮನ ಸೆಳೆದರು. ಜತೆಗೆ ವಿದ್ಯಾರ್ಥಿನಿ ರೂಪಶ್ರೀ ಜತೆಗೂಡಿ ಕವಿರಾಜಮಾರ್ಗ ಕಾವ್ಯವಾಚನ ಮಾಡಿ ಮೆಚ್ಚುಗೆ ಗಳಿಸಿದರು.
ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಕಲಾವಿದೆ ಜಮುನಾರಾಣಿ ಮಿರ್ಲೆ, ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ ಅವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ವಿಕಾಸ್ ನಾಯಕ (ಪ್ರ), ವಿನೋದ (ದ್ವಿ), ಗಗನ (ತೃ), ಗೀತಗಾಯನ ಸ್ಪರ್ಧೆಯಲ್ಲಿ ಎನ್.ಚಂದು(ಪ್ರ), ಶಶಿರೇಖಾ (ದ್ವಿ), ಉಲ್ಲಾಸ್ (ತೃ), ಭಾಷಣ ಸ್ಪರ್ಧೆಯಲ್ಲಿ ಅನುಷಾ (ಪ್ರ), ಯಶಸ್ವಿನಿ (ದ್ವಿ), ಮಂಗಳಮ್ಮ (ತೃ) ಬಹುಮಾನ ಪಡೆದುಕೊಂಡರು.
ಮುಖ್ಯ ಶಿಕ್ಷಕಿ ಪಿ.ವಿ.ಸಂಗೀತಾ, ಶಿಕ್ಷಕರಾದ ಡಿ.ಎಂ.ಮಹದೇವು, ಎಚ್.ಬಿ.ಅಣ್ಣೇಗೌಡ, ಎಂ.ರಂಗಸ್ವಾಮಿ, ಎಂ.ಎಸ್.ಶಿವಕುಮಾರ್, ಎಚ್.ಬಿ.ರೂಪಶ್ರೀ, ಪಿ.ಪುಷ್ಪಾ, ಕೆ.ಎಸ್.ಈಶ್ವರಿ, ಶರೀನ್ ಬಾನು, ಎಸ್.ಎಸ್.ಉಜ್ವಲಾ, ಭಾಗ್ಯ ಲಕ್ಷ್ಮಮ್ಮ, ಜಾದೂಗಾರ್ ಗುರುಸ್ವಾಮಿ ಇತರರು ಇದ್ದರು.