ಜಿಲ್ಲೆ

ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ಆಗ್ರಹ

ಬೆಳಗಾವಿ: ಹುಕ್ಕೇರಿ ತಾಲೂಕು ವ್ಯಾಪ್ತಿಯ ಕೆಲ ಹಳ್ಳಿಗಳಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದು, ಅವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಕರುನಾಡ ರಕ್ಷಣಾ ವೇದಿಕೆಯಿಂದ ಬೆಳಗಾವಿಯಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ನಗರದ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ವೇದಿಕೆಯ ಪದಾಧಿಕಾರಿಗಳು, ಮೈಕ್ರೋ ಫೈನಾನ್ಸ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹುಕ್ಕೇರಿ ತಾಲೂಕಿನ ಬಸಾಪುರ, ಹಗೆದಾಳ, ಕಟ್ಟಾ ಬಳ್ಳಿ ಗ್ರಾಮಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿ ಯಾವುದೇ ಭದ್ರತೆ ಇಲ್ಲದೆ ಅಮಾಯಕ ಮಹಿಳೆಯರಿಗೆ ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ನೀಡಿ ತುಂಬಲು ವಿಪರೀತ ಕಿರುಕುಳ ನೀಡುತ್ತಿದ್ದಾರೆ. ನಿಯಂತ್ರಿಸಲು ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿ ಕಠಿಣ ಕ್ರಮಗಳನ್ನು ತಂದಿದ್ದರೂ ಫೈನಾನ್ಸ್ ಸಿಬ್ಬಂದಿಯಿಂದ ಕಿರುಕುಳ ತಪ್ಪಿಲ್ಲ. ಈ ನಿಟ್ಟಿನಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯೋರ್ವಳು ಮಾತನಾಡಿ, ನಮ್ಮ ತಂದೆ-ತಾಯಿ 4 ಲಕ್ಷ ರೂ. ಸಾಲ ಮಾಡಿದ್ದರು. ಅರ್ಧ ತುಂಬಿದ್ದರು. ಈಗ ಅವರು ತೀರಿಕೊಂಡಿದ್ದಾರೆ. ಒಂದು ಮನೆಯು ಮಳೆಗಾಲದಲ್ಲಿ ಬಿದ್ದು ಹೋಗಿದೆ. ನಮ್ಮ ಸಹೋದರರಿಗೆ ಸಾಲ ತುಂಬಲು ಕಿರುಕುಳ ನೀಡುತ್ತಿದ್ದಾರೆ. ಅವರು ಕೂಲಿ ಮಾಡುತ್ತಿದ್ದು ಹೇಗೆ ತುಂಬಬೇಕು? ಎಂದು ಅಳಲು ತೋಡಿಕೊಂಡರು. ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು. ಮಲ್ಲಿಕಾರ್ಜುನ ಮರಕುಂಬಿ, ಮಂಜುನಾಥ ಜಲ್ಲಿ ಇತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.