ಸೊರಬ: ತಾಲೂಕಿನ ಚಂದ್ರಗುತ್ತಿ ಹೋಬಳಿಯ ದ್ಯಾವಾಸದಲ್ಲಿ ಶ್ರೀ ಭೂತೇಶ್ವರ ದೇವರ ಕಾರ್ತಿಕೋತ್ಸವವನ್ನು ಶುಕ್ರವಾರ ವಿಜೃಂಭಣೆಯಿಂದ ಆಚರಿಸಲಾಯಿತು. ದೇವರಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿತು. ವಿಶೇಷವಾಗಿ ದೇವಸ್ಥಾನಕ್ಕೆ ವಿದ್ಯುತ್ ದೀಪಗಳಿಂದ ಶೃಂಗರಿಸಿದ್ದು ನೋಡುಗರ ಗಮನ ಸೆಳೆಯಿತು. ಪ್ರತಿ ವರ್ಷ ಗ್ರಾಮದ ಮಹಿಳೆಯರು ಮನೆಗಳಿಂದ ಶ್ರೀ ಭೂತೇಶ್ವರ ದೇವಸ್ಥಾನದವರೆಗೆ ಕುಂಭ ಕಳಶ ಮೆರವಣಿಗೆ ನಡೆಸಿ ದೇವಸ್ಥಾನದಲ್ಲಿ ಬೆಳಗಿನ ಜಾವದವರೆಗೆ ದೀಪವನ್ನು ಹಚ್ಚಿಡುವುದು ನಡೆದುಕೊಂಡು ಬಂದಿದೆ. ಗ್ರಾಮದ ಮನೆ ಮನೆಗಳಲ್ಲಿ ದೀಪಾಲಂಕಾರ, ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿ ದೀಪವನ್ನು ಹಚ್ಚಿ ಸಂಭ್ರಮಿಸಲಾಯಿತು. ಶ್ರೀ ಚಂದಮಾಮ ಕಲಾನಾಟ್ಯ ಸಂಘದಿಂದ ಕೆರಳಿದ ಕರ್ನಾಟಕದ ಹುಲಿ ಅರ್ಥಾತ್ ಸೇಡಿನ ಕಿಡಿ ಎಂಬ ಸುಂದರ ರೌದ್ರಮಯ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.