ಹಲಗೂರು: ಬಸವನ ಬೆಟ್ಟದ ಮೇಲೆ ನೆಲೆಸಿರುವ ಆರಾಧ್ಯ ದೈವ ಹೆಬ್ಬೆಟ್ಟದ ಬಸವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಕಡೆ ಶುಕ್ರವಾರ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಮತ್ತು ಕಡಲೇಕಾಯಿಯಿಂದ ವಿಶೇಷವಾಗಿ ಶೃಂಗರಿಸಿ, ವಿವಿಧ ಪೂಜಾ ಪುನಸ್ಕಾರಗಳನ್ನು ನೆರವೇರಿಸಲಾಯಿತು.
ದೇಗುಲದ ಅರ್ಚಕ ಬಸವರಾಜು ಮಾತನಾಡಿ, ಸ್ವಾಮಿಗೆ ಭಕ್ತರು ಹರಕೆ ಮಾಡಿಕೊಂಡು ಒಬ್ಬಟ್ಟಿನ ಊಟ ನೈವೇದ್ಯ ಮಾಡಿ ಬಡಿಸುವುದು ಬಸವೇಶ್ವರ ಸ್ವಾಮಿಗೆ ತುಂಬ ಪ್ರಿಯ ಎಂದು ಹೇಳಿದರು.
ಮಂಡ್ಯ ಜಿಲ್ಲೆ ಹಾಗೂ ಮಳವಳ್ಳಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾವುದೇ ದೇವರ ಜಾತ್ರೆ, ಹಬ್ಬ, ಹರಿದಿನ, ಕೊಂಡೋತ್ಸವ, ಬಂಡಿ ಉತ್ಸವ ನಡೆಯಬೇಕಾದರೆ ಆ ಗ್ರಾಮದವರು ಇಲ್ಲಿ ಬಂದು ಹೆಬ್ಬೆಟ್ಟದ ಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ತಮ್ಮ ಗ್ರಾಮದಲ್ಲಿ ನಡೆಯುವ ಶುಭ ಸಮಾರಂಭಕ್ಕೆ ಅಪ್ಪಣೆ ಪಡೆಯುತ್ತಾರೆ ಎಂದು ತಿಳಿಸಿದರು.
ಅರ್ಚಕರಾದ ಪ್ರಸಾದ್, ಕುಮಾರ್, ಬಸವರಾಜು ಹಾಗೂ ಹಲಗೂರಿನ ವಿನಾಯಕ ಯುವಕ ಮಿತ್ರ ಮಂಡಳಿಯ ಎಚ್.ಎಂ.ರಾಕೇಶ್, ಸದಸ್ಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಸ್ವಾಮಿಗೆ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಹಲಗೂರಿನ ಅಘೋರ ಭದ್ರಕಾಳಿ ಶಕ್ತಿ ಪೀಠದ ಬಸವ ದೇವರ ದರ್ಶನ ಪಡೆಯಿತು.