ಕಾರಟಗಿ: ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ನಾವೆಲ್ಲರೂ ಪಟ್ಟಣವನ್ನು ಸ್ವಚ್ಛವಾಗಿಡಬೇಕು. ಪಟ್ಟಣ ಸ್ವಚ್ಛತೆಯಿಂದ ಇದ್ದರೆ ಮಾತ್ರ ನಾವುಗಳು ಸ್ವಾಸ್ಥೃ ಜೀವನ ನಡೆಸಲು ಸಾಧ್ಯ ಎಂದು ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು ಹೇಳಿದರು.
ಪಟ್ಟಣದಲ್ಲಿನ ವಿವಿಧ ವಾರ್ಡ್‌ಗಳಿಗೆ ಶುಕ್ರವಾರ ಹಸಿ, ಒಣ ಕಸ ಬೇರ್ಪಡಿಸಲು ಕಸದ ಬುಟ್ಟಿಗಳ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು. ಹಸಿ-ಒಣ ಕಸ ವಿಂಗಡಿಸಲು ಪ್ರತಿ ಮನೆಗಳಿಗೆ ಹಸಿರು ಹಾಗೂ ನೀಲಿ ಬಣ್ಣದ ಕಸದ ಬುಟ್ಟಿಗಳನ್ನು ವಿತರಿಸಲಾಗುತ್ತಿದೆ.
ಸಾರ್ವಜನಿಕರು ಇನ್ಮುಂದೆ ಕಸವನ್ನು ಬುಟ್ಟಿಗಳಲ್ಲೇ ಸಂಗ್ರಹಿಸಿ ವಾಹನಕ್ಕೆ ಹಾಕಬೇಕು, ತ್ಯಾಜ್ಯ ಸಂಸ್ಕರಣೆಗೆ ಇದು ಅನುಕೂಲವಾಗಲಿದೆ. ಶೀಘ್ರದಲ್ಲಿಯೇ ಕಸ ವಿಂಗಡನೆ ಘಟಕ ಸಹ ನಿರ್ಮಾಣ ಮಾಡಲಾಗುವುದು. ಪಟ್ಟಣದಲ್ಲಿ ಸಾರ್ವಜನಿಕರಿಗೆ ಕಸದಿಂದ ಸಮಸ್ಯೆಯಾಗದಂತೆ ಕ್ರಮವಹಿಸಲಾಗುತ್ತಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಈಶಪ್ಪ ಇಟ್ಟಂಗಿ ಮಾತನಾಡಿದರು. ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಸದಸ್ಯ ಫಕೀರಪ್ಪ, ಮುಖ್ಯಾಧಿಕಾರಿ ಸುರೇಶ್ ಶೆಟ್ಟರ್, ಸಿಬ್ಬಂದಿ ಚನ್ನಬಸವ ಹಿರೇಮಠ ಸೇರಿ ಇತರರಿದ್ದರು.