ಕಾರಟಗಿಯಲ್ಲಿ ಸಚಿವ ಶಿವರಾಜ ತಂಗಡಗಿಗೆ ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಮಾದಿಗ ದಂಡೋರ ಜಿಲ್ಲಾ ಕಾರ್ಯ ಅಧ್ಯಕ್ಷ ಗಂಗಣ್ಣ ಸಿದ್ದಾಪುರ, ಪದಾಧಿಕಾರಿಗಳಾರ ಶಿವಣ್ಣ ಈಳಿಗನೂರು, ಗಂಗಪ್ಪ ಇಂದಿರಾನಗರ, ಮಹಾದೇವ ಬಡಿಗೇರ್, ಜಯಪ್ಪ ಬಸವಣ್ಣಕ್ಯಾಂಪ್, ಆಂಜನೇಯ ಈಳಿಗನೂರು, ಹುಲ್ಲೇಶ ಇಂದಿರಾನಗರ, ಶಾಂತಪ್ಪ ಬಸರಿಗಿಡ ಇತರರಿದ್ದರು. 
ಜಿಲ್ಲೆ

ಸದನದಲ್ಲಿ ಒಳಮೀಸಲಾತಿ ಚರ್ಚೆಯಾಗಲಿ

ಕಾರಟಗಿ: ಒಳಮೀಸಲಾತಿ ಜಾರಿ ಬಗ್ಗೆ ಸದನದಲ್ಲಿ ಸಚಿವರು ಧ್ವನಿ ಎತ್ತುವಂತೆ ಆಗ್ರಹಿಸಿ ಸಚಿವ ಶಿವರಾಜ ತಂಗಡಗಿಗೆ ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಭಾನುವಾರ ಪಟ್ಟಣದಲ್ಲಿ ಮನವಿ ಸಲ್ಲಿಸಿದರು.

ದಲಿತ ವಿಮೋಚನಾ ಸೇನೆ ತಾಲೂಕು ಅಧ್ಯಕ್ಷ ಮೌನೇಶ ಭಜರಂಗಿ ಮಾತನಾಡಿ, ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಹರಿಯಾಣ ಬಿಜೆಪಿ ಸರ್ಕಾರ ಒಂದೇ ವಾರದಲ್ಲಿ ಮೀಸಲಾತಿ ಜಾರಿಗೊಳಿಸಿದೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಮೀನಮೇಷ ಎಣಿಸುತ್ತಿದೆ. ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ವಾರದಲ್ಲೇ ಒಳ ಮೀಸಲಾತಿ ಜಾರಿ ಮಾಡುವ ಭರವಸೆ ನೀಡಿತ್ತು. ಆದರೆ, ಈಗ ನಾನಾ ಕಾರಣ ಮುಂದಿಟ್ಟು, ಹಿಂದೇಟು ಹಾಕುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬೆಳಗಾವಿ ಅಧಿವೇಶನ ವೇಳೆ ಬೃಹತ್ ಹಕ್ಕೊತ್ತಾಯ ಸಮಾವೇಶ ನಡೆಸುವ ಮೂಲಕ ಆಕ್ರೋಶ ಹೊರಹಾಕುತ್ತಿದ್ದೇವೆ. ಕೂಡಲೇ ಸದನದಲ್ಲಿ ಈ ವಿಷಯದ ಮೇಲೆ ಮಾತನಾಡಬೇಕೆಂದು ಒತ್ತಾಯಿಸಿದರು.

ಸಚಿವ ಶಿವರಾಜ ತಂಗಡಗಿ ಮಾತನಾಡಿ, ಸಚಿವರು ಸರ್ಕಾರದ ಭಾಗವಾಗಿದ್ದು, ಈ ವಿಷಯದ ಕುರಿತು ಮಾತನಾಡಲು ಬರುವುದಿಲ್ಲ. ಆದರೆ, ನಿಮ್ಮ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಸಿಎಂ ಈ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಒಳಮೀಸಲಾತಿ ಹಂಚಿಕೆಗೆ ಪರಿಶಿಷ್ಠ ಜಾತಿಯಲ್ಲಿರುವ ಉಪಜಾತಿಗಳ ಜನಸಂಖ್ಯೆ ಎಂಪೆರಿಕಲ್ ಡೇಟಾ (ದತ್ತಾಂಶ) ಅಗತ್ಯವಿದೆ. ಈ ದತ್ತಾಂಶಗಳು ಕೈ ಸೇರುತ್ತಿದ್ದಂತೆ ಒಳ ಮೀಸಲಾತಿ ಸಮರ್ಪಕವಾಗಿ ಜಾರಿಗೊಳಿಸಲಾಗುತ್ತದೆ. ಇದರ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಭರವಸೆ ನೀಡಿದರು.