ಜಿಲ್ಲೆ

ಕರೊನಾದಿಂದ ಚರಂಡಿ ಪಾಲಾದ ಹಾಲು, ಸೀಲ್‌ಡೌನ್ ಗ್ರಾಮದಲ್ಲಿ ಡೇರಿಯಿಂದ ಹಾಲು ಶೇಖರಣೆ ಸ್ಥಗಿತ ಒಕ್ಕೂಟದ ಕ್ರಮಕ್ಕೆ ರೈತರ ಬೇಸರ

Bengaluru Rural

ನಂದಗುಡಿ; ಕರೊನಾ ಕಾಣಿಸಿಕೊಂಡ ಗ್ರಾಮದಲ್ಲಿ ರೈತರಿಂದ ಹಾಲು ಶೇಖರಣೆ ಮಾಡದ ಪರಿಣಾಮ 500ಕ್ಕೂ ಹೆಚ್ಚು ಲೀಟರ್ ಹಾಲು ಚರಂಡಿ ಪಾಲಾಗಿದೆ.

ಬೈಲನರಸಾಪುರ ಗ್ರಾಪಂ ವ್ಯಾಪ್ತಿಯ ಚಿಕ್ಕಕೊರಟಿಯಲ್ಲಿ ಶುಕ್ರವಾರ ಗರ್ಭಿಣಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ. ಇದರಿಂದ ಹಾಲು ಒಕ್ಕೂಟ ಹಾಲು ಸಂಗ್ರಹಣೆ ಸ್ಥಗಿತಗೊಳಿಸಿದೆ. ಶನಿವಾರ ಸಂಜೆ ಹಾಲು ತಂದ ರೈತರು ಚರಂಡಿಗೆ ಸುರಿದಿದ್ದಾರೆ.

ಬೆಳಗ್ಗೆ ಮತ್ತು ಸಂಜೆ 1000 ಲೀಟರ್ ಹಾಲು ಸಂಗ್ರಹಣೆಯಾಗುತ್ತದೆ. ಸೀಲ್‌ಡೌನ್ ಕಾರಣ ಹಾಲು ಶೇಖರಣಾ ವಾಹನ ಬಾರದ ಹಿನ್ನೆಲೆಯಲ್ಲಿ ಡೇರಿಯಲ್ಲಿ ಹಾಲು ಸಂಗ್ರಹಿಸಿಲ್ಲ.

ಹಾಲು ಸಂಗ್ರಹಣೆ ಇರುವುದಿಲ್ಲವೆಂದು ಶುಕ್ರವಾರ (ಮೇ 22) ಸಂಜೆಯೇ ಮಾಹಿತಿ ನೀಡಲಾಗಿತ್ತು.

ಈ ಹಿಂದೆಯೂ ಬೈನರಸಾಪುರದಲ್ಲಿ ಏಪ್ರಿಲ್ 6 ರಂದು ಸೋಂಕು ಕಂಡುಬಂದು ಸೀಲ್‌ಡೌನ್‌ಗೆ ಒಳಪಟ್ಟಿದ್ದ ಕಾರಣ ಮೇ 17ರವರೆಗೂ ಹಾಲು ಸಂಗ್ರಹಣೆ ಸ್ಥಗಿತ ಮಾಡಿದ್ದು, ಮೇ 18 ರಿಂದ ಸೀಲ್‌ಡೌನ್ ತೆರವಾದ್ದರಿಂದ ಪುನಾರಂಭಿಸಲಾಗಿತ್ತು. ಇದೇ ನಿಯಮವನ್ನು ಚಿಕ್ಕಕೊರಟಿ ಮತ್ತು ದಿನ್ನೆಕೊರಟಿಗೂ ಅನ್ವಯಿಸಲಾಗಿದೆ.

ಜಿಲ್ಲಾಧಿಕಾರಿಗಳು ಅನುಮತಿ ನೀಡುವವರೆಗೂ ಈ ನಿಯಮ ಮುಂದುವರಿಯಲಿದೆ. ಹಾಲು ಸಂಗ್ರಹಣೆ ಸ್ಥಗಿತಗೊಳಿಸಿರುವ ಬಗ್ಗೆ ಜಿಲ್ಲಾಧಿಕಾರಿ, ತಹಸೀಲ್ದಾರ್‌ಗೆ ವರದಿ ನೀಡಲಾಗಿದೆ ಎಂದು ಬೆಂಗಳೂರು ಹಾಲು ಒಕ್ಕೂಟದ ಹೊಸಕೋಟೆ ಶಿಬಿರ ಕಚೇರಿ ಉಪವ್ಯವಸ್ಥಾಪಕ ಡಾ. ಶಿವಾಜಿ ನಾಯಕ್ ತಿಳಿಸಿದ್ದಾರೆ.

ಪರ‌್ಯಾಯ ವ್ಯವಸ್ಥೆ ಶೀಘ್ರ: ಗ್ರಾಮಕ್ಕೆ ಜಿಪಂ ಸದಸ್ಯ ಸಿ.ನಾಗರಾಜ್ ಭಾನುವಾರ ಭೇಟಿ ನೀಡಿ ರೈತರಿಗೆ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿದರು. ಖರೀದಿ ಸ್ಥಗಿತ ಮಾಡಿದರೆ ನಿತ್ಯ ಸಾಕಷ್ಟು ನಷ್ಟ ಉಂಟಾಗುತ್ತದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಂಗ್ರಹಣೆಗೆ ಪರ‌್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಡೇರಿಯಿಂದ ಹಾಲು ಪಡೆಯುವುದನ್ನು ಸ್ಥಗಿತ ಮಾಡಿರುವುದರಿಂದ ಅಪಾರ ನಷ್ಟವಾಗುತ್ತಿದೆ. ಈ ಬಗ್ಗೆ ಕೆಎಂಎಫ್ ಅಧಿಕಾರಿಗಳು ಪರ‌್ಯಾಯ ಕ್ರಮ ಕೈಗೊಳ್ಳುವ ಮೂಲಕ ಹೈನುಗಾರರಿಗೆ ಸಹಾಯ ಮಾಡಬೇಕು. ಪಟಾಲಪ್ಪ, ಎಂಪಿಸಿಎಸ್ ಅಧ್ಯಕ್ಷ, ಚಿಕ್ಕಕೊರಟಿ