ಜಿಲ್ಲೆ

ಕರ್ನಾಟಕದ ಶ್ರೇಷ್ಠ ದಾರ್ಶನಿಕ, ಲೋಕಜ್ಞಾನಿ ಸರ್ವಜ್ಞ; ಇಂದು ಜಯಂತಿ ಆಚರಣೆ | Sarvajna Jayanti

| ಚಂದ್ರಶೇಖರ ಗಂಧನಹಳ್ಳಿ

Sarvajna Jayanti : ಮದುವೆಯಾಗಿ ಹಲವು ವರ್ಷಗಳು ಕಳೆದರೂ ಬಸವರಸ ಮತ್ತು ಮಲ್ಲಮ್ಮ ದಂಪತಿಗೆ ಮಕ್ಕಳಾಗಿರಲಿಲ್ಲ, ಊರಿನವರ ಕೊಂಕು ನುಡಿಗಳಿಂದ ಖಿನ್ನತೆಗೊಳಗಾದ ಹೆಂಡತಿಯನ್ನು ಸಂತೈಸಿ, ಆಕೆಯ ಸಮಾಧಾನಕ್ಕಾಗಿ ಬಸವರಸ ಕಾಶಿಯಾತ್ರೆಗೆ ತೆರಳುತ್ತಾನೆ. ಕಾಶಿ ವಿಶ್ವನಾಥನ ದರ್ಶನ ಪಡೆದು ಸಂತಾನ ವರ ಕೋರುವ ಆತನಿಗೆ, ‘ಪುತ್ರ ಪ್ರಾಪ್ತಿಯಾಗುವುದು, ಹುಟ್ಟುವ ಮಗನು ಮಹಾಜ್ಞಾನಿಯಾಗುವನು’ ಎಂಬ ದೈವಿಕವಾಣಿ ನುಡಿದಂತೆ ಭಾಸವಾಗುತ್ತದೆ. ಇದರಿಂದ ಆನಂದಭರಿತನಾದ ಬಸವರಸ ಪವಿತ್ರ ಗಂಗಾ ಸ್ನಾನ ಮಾಡಿ ತನ್ನೂರಿಗೆ ಹಿಂದಿರುಗುತ್ತಾನೆ. ಹೀಗೆ ದಾರಿಯಲ್ಲಿ ಹಗಲಿರುಳು ಪ್ರಯಾಣಿಸಿ ಅನೇಕ ಗ್ರಾಮಗಳಲ್ಲಿ ವಿಶ್ರಮಿಸಿ ಕೊನೆಗೆ ದಾರಿಯಲ್ಲಿ ಸಿಕ್ಕ ಅಬಲೂರ ಎಂಬ ಗ್ರಾಮಕ್ಕೆ ಬರುವಾಗ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯಲಾರಂಭಿಸುತ್ತದೆ. ಊರಿನ ಹೊರವಲಯದಲ್ಲಿದ್ದ ಕುಂಬಾರಸಾಲೆಯ ಮಾಳಿ ಎಂಬುವರ ಮನೆಯಲ್ಲಿ ಆ ರಾತ್ರಿ ವಾಸ್ತವ್ಯ ಹೂಡುತ್ತಾನೆ. ಮನೆಯಲ್ಲಿ ಒಬ್ಬಳೇ ಇದ್ದಿದ್ದಲ್ಲದೇ ಊಟೋಪಚಾರ ನೀಡಿದ ಮಾಳಿ ಮೇಲೆ ಬಸವರಸ ಕಾಲಧರ್ಮ ಸಂಯೋಗದಿಂದ ವ್ಯಾಮೋಹಗೊಳ್ಳುತ್ತಾನೆ. ಕಾಶಿಯಿಂದ ತಂದಿದ್ದ ತೀರ್ಥ ಪ್ರಸಾದಗಳನ್ನು ಕೊಟ್ಟು ಆಕೆಯ ಸಂಗ ಮಾಡುತ್ತಾನೆ. ದೈವ ಕೃಪೆಯಂತೆ ಮಾಳಿ ಒಂಬತ್ತು ತಿಂಗಳ ನಂತರ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಅಷ್ಟರಲ್ಲಾಗಲೇ ಮಾಳಿ ಮತ್ತು ಬಸವರಸನ ನಡುವಿನ ಸಂಬಂಧದ ಬಗ್ಗೆ ಹಿರಿಯ ಹೆಂಡತಿ ಮಲ್ಲಮ್ಮಳಿಗೂ ತಿಳಿದಿರುತ್ತದೆ. ಮಲ್ಲಮ್ಮಳ ಕೋರಿಕೆಯಂತೆಯೇ ಮಾಳಿಯಿಂದ ಜನಿಸಿದ ಮಗುವಿಗೆ ಪುಷ್ಪದತ್ತ ಎಂದು ನಾಮಕರಣ ಮಾಡಿದಲ್ಲದೇ ಆ ಮಗುವನ್ನು ತಾನೇ ಸಾಕುತ್ತಾಳೆ. ಇದೇ ಪುಷ್ಪದತ್ತ ಮುಂದೆ ಸರ್ವಜ್ಞ ಎಂಬ ಕಾವ್ಯನಾಮದಿಂದ ಚಿರಸ್ಥಾಯಿಯಾಗಿರುವುದು ಇತಿಹಾಸ. ಹಾವೇರಿ ಜಿಲ್ಲೆ ಹಿರೇಕೆರೂರ ತಾಲೂಕಿನ ಅಂಬಲೂರ ಪುಷ್ಪದತ್ತನಿಗೆ ಜನ್ಮನೀಡಿದ ಕುಂಬಾರ ಮಾಳಿಯ ಊರಾದರೆ, ಇದೇ ತಾಲೂಕಿನ ಮಾಸೂರು ಬಸವರಸ ಮತ್ತು ಮಲ್ಲಮ್ಮ (ಸರ್ವಜ್ಞನ ಸಾಕು ತಾಯಿ) ಅವರ ಊರು. ಸರ್ವಜ್ಞನ ಕಾಲಘಟ್ಟದ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿದ್ದರೂ ಇತಿಹಾಸ ತಜ್ಞರ ಪ್ರಕಾರ ಸುಮಾರು 16ನೇ ಶತಮಾನದ ಆದಿಭಾಗ ಎನ್ನಲಾಗಿದೆ.

ಪುಷ್ಪದತ್ತ ಬಾಲ್ಯದಲ್ಲಿಯೇ ಅಗಾಧವಾದ ಪಾಂಡಿತ್ಯವನ್ನು ಶಿವನ ವರಪ್ರಸಾದದಿಂದ ಪಡೆದಿದ್ದನು. ಆದರೆ, ವಿಧಿಯಾಟವೋ ಅಥವಾ ದೈವ ಕೃಪೆಯೋ ಕೆಲವೇ ವರ್ಷಗಳಲ್ಲಿ ಇಡೀ ಕುಟುಂಬ, ಸಂಬಂಧಗಳಿಂದ ದೂರವಾಗಿ ಪುಣ್ಯಕ್ಷೇತ್ರಗಳನ್ನೂ, ಗುರುಮಠಗಳನ್ನೂ ಭೇಟಿ ಮಾಡಿ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳುತ್ತಾನೆ. ಎಲ್ಲ ಶಾಸ್ತ್ರಗಳ ಜ್ಞಾನವನ್ನು ಸಂಪಾದಿಸುತ್ತಾನೆ. ಯಾವುದೇ ರಾಜಾಶ್ರಯವನ್ನು ಭಯಸದೆ ಊರಿಂದ ಊರಿಗೆ ನಡಿಗೆಯಲ್ಲಿ ತೆರಳಿ, ಜನಸಾಮಾನ್ಯರು, ಕಾರ್ಮಿಕರು, ರೈತರ ಮಧ್ಯೆ ಇದ್ದು, ಎಲ್ಲರೊಂದಿಗೆ ಬಾಳಿ ಸ್ಥಳೀಯ ಸಾಮಾಜಿಕ, ಧಾರ್ಮಿಕ ಕಟ್ಟುಪಾಡುಗಳನ್ನು ಮನವರಿಕೆ ಮಾಡಿಕೊಳ್ಳುತ್ತಾನೆ. ಸಾಧು, ಸಂತರನ್ನು ಸಂಧಿಸಿ ಜೀವನ್ಮರಣದ ವಾಸ್ತವತೆಯನ್ನು ತಿಳಿದುಕೊಳ್ಳುತ್ತಾನೆ.

ಜ್ಞಾನಾರ್ಜನೆಯ ನಂತರ ಸಮಾಜದ ಅಂಕುಡೊಂಕುಗಳನ್ನು, ಡಂಭಾಚಾರ, ಮೂಢನಂಬಿಕೆ, ಶೊಷಣೆ ಮುಂತಾದವುಗಳನ್ನು ವಚನಗಳ ಮೂಲಕ ಕಟುವಾಗಿ ಟೀಕಿಸುವ ಜತೆಗೆ ಅವುಗಳಿಂದ ಮುಕ್ತವಾದ ಸಮ ಸಮಾಜವನ್ನು ನಿರ್ಮಾಣ ಮಾಡುವ ಉದ್ದೆಶವನ್ನು ಪ್ರತಿಪಾದಿಸುತ್ತಾನೆ. ಸಾಕಷ್ಟು ವಿಷಯಗಳನ್ನು ಜಾನಪದ ಹಾಡಿನ ಮೂಲಕ ಕಟ್ಟಿ, ಜನಸಾಮಾನ್ಯರು, ರೈತರು, ಅನಕ್ಷರಸ್ಥರಲ್ಲೂ ಬಾಯಿಂದ ಬಾಯಿಗೆ ಹರಡುವಂತೆ ಮಾಡುತ್ತಾನೆ. ಈತನ ಆಗಾಧ ಜ್ಞಾನದಿಂದಾಗಿಯೇ ಸರ್ವಜ್ಞನೆಂದು ಪ್ರಸಿದ್ಧಿ ಪಡೆದನು. ಆದ್ದರಿಂದಲೇ ಸರ್ವಜ್ಞ ಎಂಬುದು ಈತನ ಕಾವ್ಯನಾಮವಾಯಿತು. ಪರಮಾರ್ಥ ಎನ್ನುವ ಅಂಕಿತದಲ್ಲೂ ಈತ ಬರೆದಿದ್ದನು ಎನ್ನುವ ಊಹೆಯೂ ಇದೆ.

ಸಂಸ್ಕೃತದಲ್ಲಿ ಸರ್ವಜ್ಞ ಎಂದರೆ ಎಲ್ಲವನ್ನು ತಿಳಿದವನು ಎಂಬ ಅರ್ಥವನ್ನು ನೀಡುತ್ತದೆ. ಆಡು ಮುಟ್ಟದ ಸೊಪ್ಪಿಲ್ಲ ಸರ್ವಜ್ಞನು ಹೇಳದ ಮಾತಿಲ್ಲ ಎನ್ನುವುದು ಸರ್ವಜ್ಞನಿಗಾಗಿಯೇ ಹುಟ್ಟಿಕೊಂಡಿರುವ ಗಾದೆ ಇದು. ಅಂದರೆ ಸರ್ವಜ್ಞ ಎಲ್ಲ ವಿಷಯಗಳನ್ನು ಬಲ್ಲವ ಎಂದರ್ಥ. ಸರ್ವಜ್ಞ ಎನ್ನುವುದು ಸಮಾಜ ಅವನನ್ನು ಗುರುತಿಸಿದ ಹೆಸರು. ಅದು ಗರ್ವದಿಂದ ಆತ ಇಟ್ಟುಕೊಂಡ ಹೆಸರಲ್ಲ.

ಸರ್ವಜ್ಞನೆಂಬವನು ಗರ್ವದಿಂದಾದವನೆ

ಸರ್ವರೊಳಗೊಂದೊಂದು ನುಡಿಗಲಿತು ವಿದ್ಯೆಯಾ

ಪರ್ವತವೆ ಆದ ಸರ್ವಜ್ಞ

ಜ್ಞಾನಕ್ಕೆ ತಕ್ಕ ವಿನಯದ ಅಗತ್ಯದ ಅರಿವು ಆತನಿಗಿತ್ತು, ಜೀವನಾನುಭವಕ್ಕಿಂತ ಮಿಗಿಲಾದ ಜ್ಞಾನ ಬೇರೊಂದಿಲ್ಲ ಎಂಬುದನ್ನು ಆತ ವಚನಗಳ ಮೂಲಕ ಮತ್ತೆ ಮತ್ತೆ ಒತ್ತಿ ಹೇಳಿದ್ದಾನೆ.

ಸರ್ವಜ್ಞನು ಮೂರು ಸಾಲಿನಲ್ಲಿ ಮಹಾಕಾವ್ಯಗಳ, ಮಹಾ ಗ್ರಂಥಗಳ ಸಾರವನ್ನು ಹಿಡಿದಿಟ್ಟಿದ್ದಾನೆ. ತುಳಸಿದಾಸರು ಹೇಳುವಂತೆ ಗಾಗರ್ವೆ ಸಾಗರ ಅಂದರೆ ಕೊಡದಲ್ಲಿ ಸಾಗರವನ್ನು ತುಂಬಿಸುವಂತೆ ಮೂರು ಸಾಲಿನ ಪದ್ಯದಲ್ಲಿ ಸರ್ವಜ್ಞ ಮಹಾಕವಿಯು ಜಗತ್ತಿನ ಜ್ಞಾನ, ವೈಚಾರಿಕತೆ, ಮಾನವೀಯ ಮೌಲ್ಯಗಳನ್ನು ತುಂಬಿಟ್ಟಿದ್ದಾನೆ. ಈ ಸಾಹಿತ್ಯದ ತ್ರಿಪದಿಗಳ ವಿಶೇಷವೇನೆಂದರೆ ಷಟ್ಪದಿಯ ರೂಪದಲ್ಲಿ ಛಂದಸ್ಸನ್ನು ಕಾಣುತ್ತೆವೆ. ಪ್ರತಿ ಸಾಲಿನ ಎರಡನೆಯ ಅಕ್ಷರ ಪ್ರಾಸವಾಗಿರುವುದು ಸರ್ವಜ್ಞನ ತ್ರಿಪದಿಗಳ ವಿಶೇಷ ಲಕ್ಷಣವಾಗಿದೆ. ಸರ್ವಜ್ಞನು ಚಿತ್ರ ತ್ರಿಪದಿ, ವಿಚಿತ್ರ ತ್ರಿಪದಿ, ಚಿತ್ರಲತೆ ತ್ರಿಪದಿ ಎಂಬ ಮೂರು ಪ್ರಕಾರದಲ್ಲಿ ತತ್ತ್ವ ಬೊಧಿಸಿರುವುದನ್ನು ಆತನ ವಚನಗಳಲ್ಲಿ ಕಾಣುತ್ತೆವೆ.

ದೇಶದ ಉದ್ದಗಲ ಸಂಚರಿಸಿ ತಾನು ಕಂಡು ಕೇಳಿ ಅನುಭವಿಸಿದ ವಿಚಾರಗಳನ್ನು ಅಚ್ಚ ಕನ್ನಡದ ಛಂದಸ್ಸಾದ ತ್ರಿಪದಿಗಳ ಮೂಲಕ ಜನರಿಗೆ ತಲುಪಿಸಿದ ಮಹಾ ಕವಿ ಈತ. ಸರ್ವಜ್ಞ ಕನ್ನಡದ ತ್ರಿಪದಿ ಲೊಕಕ್ಕೆ ಹೊಸ ಭಾಷ್ಯ ಬರೆದಿದ್ದಾನೆ. ಸರಳವಾದ ಪದಗಳನ್ನು, ಕನ್ನಡದ ಪಾರಂಪರಿಕ ಜನಪದ ಪದಗಳನ್ನು ಬಳಸಿ ತ್ರಿಪದಿಗಳನ್ನು ರಚಿಸಿ ಅವುಗಳ ಮೂಲಕ ಸಮಾಜದಲ್ಲಿರುವ ಅನೇಕ ಅಂಕು-ಡೊಂಕುಗಳನ್ನು ತಿದ್ದಲು ಪ್ರಯತ್ನ ಮಾಡಿದ್ದಾನೆ.

ಸಮಾಜದ ಶ್ರೆಷ್ಠ ಮನೊವಿಜ್ಞಾನಿಯಾಗಿ, ಸಮಾಜ ವಿಜ್ಞಾನಿಯಾಗಿ, ಒಬ್ಬ ಮಹಾ ವೈದ್ಯನಾಗಿ, ಕೃಷಿಕನಾಗಿ, ಪಂಡಿತನಾಗಿ, ಒಬ್ಬ ಮಹಾ ತಂತ್ರಜ್ಞಾನಿಯಾಗಿ, ಯೊಗಿಯಾಗಿ, ಜನಪದ ಕವಿಯಾಗಿ ಹೀಗೆ ಅನೇಕ ಭೂಮಿಕೆಗಳಲ್ಲಿ ಸರ್ವಜ್ಞನನ್ನು ಕಾಣಬಹುದು. ಇತ್ತಿಚಿನ ಜಾಗತಿಕ ಪಿಡುಗುಗಳಾದ ಜಾತಿ, ಮತ, ಧರ್ಮ ಸಂಘರ್ಷದ ನಾಶಕ್ಕೆ ಸರ್ವಜ್ಞನ ವಚನಗಳು ದಿವ್ಯ ಔಷಧಗಳಾಗಿ ಕಂಡುಬರುತ್ತವೆ.

ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ ?

ಜಾತಿವಿಜಾತಿಯೆನಬೇಡ ದೇವನೊಲಿದಾತನೇ

ಜಾತ ಸರ್ವಜ್ಞ ಎಂಬ ವಚನದಂತೆ ವಿಶ್ವ ಮಾನವತೆ, ವಿಶ್ವ ಕುಟುಂಬ, ಮಾನವೀಯ ಮೌಲ್ಯಗಳ ನೆಲೆಗಟ್ಟನ್ನು ಆತನ ತ್ರಿಪದಿಗಳಲ್ಲಿ ಕಾಣಬಹುದು.

ತಮಿಳಿನ ತಿರುವಳ್ಳವರಂತೆ ತೆಲುಗಿನ ವೇಮನರಂತೆ ಕನ್ನಡದಲ್ಲಿ ಸರ್ವಜ್ಞನನ್ನು ಕಾಣಲಾಗುತ್ತದೆ. ಸತ್ಯನಿಷ್ಠುರವಾದ ಸಾಮಾಜಿಕ ಕಳಕಳಿಯಿಂದ ಸರಳಸುಂದರವಾದ ಅಚ್ಚಗನ್ನಡದಲ್ಲಿ ರಚಿತವಾದ ಆತನ ವಚನಗಳು ಸರ್ವ ಕಾಲಕ್ಕೂ ಉಪದೇಶಾತ್ಮಕವಾಗಿವೆ. ಸಮಾಜದ ಮೂಢತೆಗಳನ್ನು ತೊಡೆದುಹಾಕುವ ಪ್ರಾಮಾಣಿಕ ಪ್ರಯತ್ನವನ್ನು ಆತ ಮಾಡಿದ್ದಾನೆ. ಒಂದೊಂದು ತ್ರಿಪದಿಯೂ ನೂರಾರು ಪುಟಗಳ ವ್ಯಾಖ್ಯಾನಗಳನ್ನು ಬಯಸುವಂತಹವುಗಳು.

ಸರ್ವಜ್ಞನ ಒಂದೊಂದು ವಚನವೂ ಬದುಕಿನ ವಿವಿಧ ವಿಚಾರಗಳಿಗೆ ಕನ್ನಡಿ ಹಿಡಿಯುವುದರೊಂದಿಗೆ ಬದುಕಿನಲ್ಲಿ ಎದುರಾಗುವ ನೂರಾರು ಪ್ರಶ್ನೆಗಳಿಗೆ ಸಮಸ್ಯೆಗಳಿಗೆ ಉತ್ತರಗಳನ್ನು ನೀಡುತ್ತವೆ. ಅವುಗಳಲ್ಲಿ ಇಲ್ಲದ ವಿಷಯಗಳಿಲ್ಲ. ಮಾನವ ಬದುಕಿನ ಹುಟ್ಟಿನಿಂದ ಸಾವಿನವರೆಗಿನ ಏಳುಬೀಳುಗಳಿಗೆ ಕಾರಣವಾಗುವ ವಿಚಾರಗಳೊಂದಿಗೆ, ಜ್ಞಾನ, ವಿಜ್ಞಾನ. ವೈದ್ಯ, ಜ್ಯೋತಿಷ್ಯ ಮುಂತಾದ ಸಾವಿರಾರು ವಿಷಯಗಳು ಇಲ್ಲಿ ತ್ರಿಪದಿಗಳಾಗಿ ರೂಪುತಾಳಿವೆ.

ಜಾತಿಹೀನನ ಮನೆಯ ಜ್ಯೋತಿ ತಾ ಹೀನವೆ ಜಾತಿ ವಿಜಾತಿ ಎನಬೇಡ ಶಿವನೊಲಿದಾತನೆ ಜಾತ ಸರ್ವಜ್ಞ

ಹರನೆಂಬ ದೈವ ನಮಗುಂಟು, ತಿರಿವರಿಂ ಸಿರಿವಂತರಾರು ಸರ್ವಜ್ಞ

ಮಂಡೆ ಬೋಳಿಸಿಕೊಂಡು ತುಂಡುಗಂಬಳಿ ಹೊದೆದು ಹಿಂಡನಗಲಿದ ಗಜದಂತೆ ಇಪ್ಪವನ ಕಂಡು ನಂಬುವುದು ಸರ್ವಜ್ಞ

ಸರ್ವಜ್ಞನ ತ್ರಿಪದಿಗಳು ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆಯಾಗಿವೆ. ತ್ರಿಪದಿಗಳು ಸಾರುವ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ. ಇವುಗಳು ಹಲವು ಭಾಷೆಗಳಿಗೆ ಭಾಷಾಂತರಗೊಂಡಿದ್ದು, ಭಾಷೆ ಮತ್ತು ಗಡಿಗಳ ಎಲ್ಲೆ ಮೀರಿ ಕರ್ನಾಟಕದ ಕೀರ್ತಿಯನ್ನು ಬೆಳಗಿಸಿವೆ.