ಜಿಲ್ಲೆ

ಬಿಜೆಪಿ 155 ಸೀಟು ಗೆಲ್ಲುತ್ತಿತ್ತು, ಆದ್ರೆ ಪ್ರಚಾರ ಕೈ ಕೊಡ್ತು: ಅಶೋಕ್

ಚಿಕ್ಕಬಳ್ಳಾಪುರ: ಹಿಂದಿನ ರಾಜ್ಯ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿನ ಜನಪರ ಹಲವು ಯೋಜನೆಗಳ ಬಗ್ಗೆ ಸಮರ್ಪಕವಾಗಿ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದ್ದರಿಂದ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು ಎಂದು ಮಾಜಿ ಸಚಿವ ಆರ್.ಅಶೋಕ್ ವಿಮರ್ಶಿಸಿದರು.

ಬಾಗೇಪಲ್ಲಿ ಪಟ್ಟಣದ ಕೊಂಡಂವಾರಪಲ್ಲಿಯಲ್ಲಿನ ಕೈಗೊಂಡಿದ್ದ ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಹೆಚ್ಚಿನ ಅಭ್ಯರ್ಥಿಗಳು ಗೆಲುವು ಸಾಧಿಸಿಲ್ಲ. ಮೂರು ಅಂಕಿಯಿಂದ ಎರಡು ಅಂಕಿಗೆ ಕುಸಿದಿದೆ ಎನ್ನಲಾಗುತ್ತಿದೆ. ಆದರೆ, ಮತಗಳಿಕೆಯ ಪ್ರಮಾಣವು ಶೇ.36 ರಷ್ಟು ಸಾಧನೆ ಕಂಡು ಬಂದಿದೆ. ಮಂಡ್ಯ, ಚಿಕ್ಕಬಳ್ಳಾಪುರ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಪಡೆದ ಮತಗಳು ನಿರೀಕ್ಷೆಗೂ ಮೀರಿ ಏರಿಕೆಯಾಗಿದೆ ಎಂದರು.

ಮೀಸಲಾತಿ ಘೋಷಣೆ, ಕ್ರಾಂತಿಕಾರಕ ಯೋಜನೆಗಳು, ವಿವಿಧ ಅಭಿವೃದ್ಧಿ ಕೆಲಸಗಳಿಂದ ಬಿಜೆಪಿ ಸರ್ಕಾರವು 155 ಸ್ಥಾನಗಳೊಂದಿಗೆ ಸ್ಪಷ್ಟ ಅಧಿಕಾರವನ್ನು ಪಡೆಯಬೇಕಾಗಿತ್ತು. ಆದರೆ, ಪ್ರಚಾರದಲ್ಲಿ ವೈಫಲ್ಯತೆ ಕಂಡು ಬಂತು ಎಂದರು.

ಕಾಂಗ್ರೆಸ್‌ನ ಉಚಿತ ಗ್ಯಾರಂಟಿಗಳನ್ನು ನಂಬಿ ರಾಜ್ಯದ ಜನತೆ ಮೋಸ ಹೋಗುತ್ತಿದ್ದು ಕಾಂಗ್ರೆಸ್‌ಗೆ ಓಟು ಹಾಕಿದ ಪಾಪಕ್ಕೆ ವಿದ್ಯುತ್, ಮದ್ಯ, ಆಗತ್ಯ ವಸ್ತುಗಳ ಬೆಲೆ ಏರಿಕೆ, ಮನೆ ಯಜಮಾನಿ ವಿಚಾರದಲ್ಲಿ ಅತ್ತೆ ಸೊಸೆ ಗಲಾಟೆಗಳು ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದರು.