ಧಾರವಾಡ: ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಧಾರವಾಡ ಜಿಲ್ಲೆಯಲ್ಲಿ 2025ರ ನ.1ಕ್ಕಿಂತ ಮುಂಚೆ ಕನಿಷ್ಠ 3 ವರ್ಷಗಳಷ್ಟು ಮೊದಲು ಭಾರತದಲ್ಲಿರುವ ಯಾವುದಾದರೊಂದು ವಿಶ್ವವಿದ್ಯಾಲಯದ ಪದವೀಧರನಾಗಿರುವ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ನ.6ರೊಳಗಎ ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಪ್ರಕಟಣೆ ನೀಡಿರುವ ಅವರು, ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಮತದಾರರ ಪಟ್ಟಿಗೆ ಅರ್ಹರ ಹೆಸರು ಸೇರ್ಪಡೆಗೆ ಅನುಕೂಲವಾಗುವಂತೆ ಧಾರವಾಡ ಜಿಲ್ಲೆಯಲ್ಲಿ ಮಹಾನಗರ ಪಾಲಿಕೆ ಸೇರಿ ಎಲ್ಲ ತಾಲೂಕುಗಳಲ್ಲಿ 18 ಜನ ಅಽಕಾರಿಗಳನ್ನು ಸಹಾಯಕ ಮತದಾರ ನೋಂದಣಾಧಿಕಾರಿಗಳನ್ನಾಗಿ ಮತ್ತು 10 ಜನ ಅಧಿಕಾರಿಗಳನ್ನು ನಿಯೋಜಿತ ಅಧಿಕಾರಿಗಳನ್ನಾಗಿ ಈಗಾಗಲೇ ನೇಮಿಸಿ, ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳೂ ಆಗಿರುವ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಅಧಿಕಾರಿಗಳು ಅರ್ಹ ಮತದಾರರು ಸಲ್ಲಿಸುವ ಅರ್ಜಿಗಳನ್ನು ಪರಿಶೀಲಿಸಿ, ಸ್ವೀಕರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅರ್ಹರು ನಮೂನೆ-18ರಲ್ಲಿ ಮಾಹಿತಿ ಭರ್ತಿ ಮಾಡಿ, ಅರ್ಜಿಯೊಂದಿಗೆ ಪದವಿ ಪ್ರಮಾಣಪತ್ರವನ್ನು ಪತ್ರಾಂಕಿತ ಅಧಿಕಾರಿಯ ಮೇಲು ರುಜು ಮಾಡಿಸಿ, ವಿಳಾಸದ ದಾಖಲೆಗಾಗಿ ಮತದಾರರ ಗುರುತಿನ ಚೀಟಿ ಅಥವಾ ಆಧಾರ ಕಾರ್ಡ್ ಅಥವಾ ರೇಷನ್ ಕಾರ್ಡ್ ಅಥವಾ ಇಂಡಿಯನ್ ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸನ್ಸ್ ಇವುಗಳಲ್ಲಿ ಯಾವುದಾದರೂ ಒಂದು ದಾಖಲೆಗಳೊಂದಿಗೆ ಅರ್ಜಿಯನ್ನು ಸಂಬಂಧಿಸಿದ ಸಹಾಯಕ ಮತದಾರರ ನೋಂದಣಾಧಿಕಾರಿಗಳಲ್ಲಿ ಅಥವಾ ಗೊತ್ತುಪಡಿಸಿದ ನಿಯೋಜಿತ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಕೋರಿದ್ದಾರೆ.