ಜಿಲ್ಲೆ

ಬಿಸಿಲ ಬೇಗೆಗೆ ಕರ್ನಾಟಕ ಕೆಂಡ!

ವಿಜಯಪುರ: ಬೇಸಿಗೆ ಆರಂಭಕ್ಕೂ ಮುನ್ನವೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಆಸುಪಾಸಿಗೆ ತಲುಪಿದೆ. ಕೆಲ ಜಿಲ್ಲೆಗಳಲ್ಲಿ ತಾಪಮಾನ ಈಗಾಗಲೇ 35 ಡಿಗ್ರಿ ದಾಟಿದ್ದು, ಬಿಸಿಲಿನ ತಾಪಕ್ಕೆ ಜನ ಹೈರಾಣಾಗುತ್ತಿದ್ದಾರೆ. ಸೋಮವಾರ ಮಂಗಳೂರಿನಲ್ಲಿ ಗರಿಷ್ಠ 36.7 ಡಿಗ್ರಿ, ಶಿವಮೊಗ್ಗ 36 ಡಿಗ್ರಿ, ಧಾರವಾಡದಲ್ಲಿ 36 ಡಿಗ್ರಿ, ಕಲಬುರಗಿಯಲ್ಲಿ 35.8 ಡಿಗ್ರಿ, ಉಡುಪಿಯಲ್ಲಿ 35.4 ಡಿಗ್ರಿ, ವಿಜಯಪುರ ಹಾಗೂ ಮೈಸೂರಿನಲ್ಲಿ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಬಿಸಿಲಿಗೆ ಜನರು ಮನೆ, ಕಚೇರಿ ಬಿಟ್ಟು ಹೊರ ಬರುವುದು ಕಷ್ಟವಾಗುತ್ತಿದೆ. ನೆತ್ತಿ ಸುಡುವ ರಣಬಿಸಿಲಿಗೆ ಜನತೆ ಪರಿತಪಿಸುವಂತಾಗಿದೆ. ಚಾಮರಾಜನಗರ- 32, ರಾಮನಗರ 32, ಕೋಲಾರ 29, ಚಿಕ್ಕಬಳ್ಳಾಪುರ 31, ತುಮಕೂರು 32, ಬೆಂಗಳೂರು ಗ್ರಾಮಾಂತರ 32, ಗದಗ 34, ಬಳ್ಳಾರಿ 32, ಬಾಗಲಕೋಟೆ 32, ರಾಯಚೂರು 33, ಕೊಪ್ಪಳ 32, ಚಿಕ್ಕಮಗಳೂರು, 33, ಬೆಳಗಾವಿ 31, ಹಾಸನ 33, ಕೊಡಗು 28, ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 32-36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ನೀರಿನ ಮಟ್ಟ ಇಳಿಕೆ: ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರಿಸಿದ್ದರಿಂದ ಕೆಲ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ತಕ್ಷಣಕ್ಕೆ ಕಂಡುಬಂದಿಲ್ಲ. ಆದರೆ ಬಿಸಿಲಿನ ಬೇಗೆ ಹೀಗೆ ಹೆಚ್ಚಾಗುತ್ತಿದ್ದರೆ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹದ ಪ್ರಮಾಣ ಕೂಡ ಇಳಿಕೆಯಾಗಲಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಮೋಡ ಚದುರಿದ ವಾತಾವರಣ ತಾಪಮಾನ ಹೆಚ್ಚಳಕ್ಕೆ ಕಾರಣ. | ಡಾ.ಪಿ.ಎಸ್.ಪತ್ತಾರ ಹವಾಮಾನ ತಜ್ಞ, ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ, ವಿಜಯಪುರ