ಮೈಸೂರು: ತುಂಡು ಗುತ್ತಿಗೆ ಕಾಮಗಾರಿ ನೀಡುವಲ್ಲಿ ತಾಲೂಕು ಪಂಚಾಯಿತಿಯಲ್ಲಿ ಅವ್ಯವಹಾರ ನಡೆದಿದ್ದು ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ಕರ್ನಾಟಕ ವೀರ ಕೇಸರಿ ಪಡೆಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ನಜರ್‌ಬಾದ್‌ನ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ತುಂಡು ಗುತ್ತಿಗೆ ಕಾಮಗಾರಿ ನೀಡುವಲ್ಲಿ ಅಧಿಕಾರಿಗಳು ಸರ್ಕಾರಿ ನಿಯಮ ಗಾಳಿಗೆ ತೂರಿ ತಮಗಿಷ್ಟ ಬಂದ ಗುತ್ತಿಗೆದಾರರಿಗೆ ತುಂಡು ಗುತ್ತಿಗೆ ನೀಡಿ ಅಕ್ರಮವೆಸಗಿದ್ದಾರೆ ಎಂದು ದೂರಿದರು.
ಸರ್ಕಾರಿ ನಿಯಮದ ಪ್ರಕಾರ ತಾಲೂಕು ಪಂಚಾಯಿತಿಯ ವಿವಿಧ ಲೆಕ್ಕ ಶೀರ್ಷಿಕೆಯಡಿ ತುಂಡುಗುತ್ತಿಗೆ ಕಾಮಗಾರಿ ಕೋರಿ ಅರ್ಜಿ ಸಲ್ಲಿಸಿರುವ ಗುತ್ತಿಗೆದಾರರಿಗೆ ಜ್ಯೇಷ್ಠತೆಯನ್ವಯ ತುಂಡು ಗುತ್ತಿಗೆ ಕಾಮಗಾರಿ ನೀಡಬೇಕು. ಜತೆಗೆ ಗುತ್ತಿಗೆದಾರರು ಅರ್ಜಿ ನೀಡಿರುವ ವಿವರವನ್ನು ಸ್ವೀಕೃತಿ ವಹಿ ಪುಸ್ತಕದಲ್ಲಿ ನಮೂದಿಸಬೇಕು. ಆದರೆ, ಅಧಿಕಾರಿಗಳು ಹಾಗೆ ಮಾಡದೆ ಅರ್ಜಿಯನ್ನೇ ಸಲ್ಲಿಸದ ಗುತ್ತಿಗೆದಾರರಿಗೆ ಅತಿ ಹೆಚ್ಚು ಕಾಮಗಾರಿ ನೀಡಿ ಅರ್ಜಿ ಸಲ್ಲಿಸಿದ ಗುತ್ತಿಗೆದಾರರಿಗೆ ಕಾಮಗಾರಿ ನೀಡುತ್ತಿಲ್ಲ. ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಾದ ಕಾಮಗಾರಿಯನ್ನು ಅರ್ಜಿ ಸಲ್ಲಿಸಿರುವ ಎಸ್‌ಸಿ, ಎಸ್‌ಟಿ ಗುತ್ತಿಗೆದಾರರಿಗೆ ನೀಡದೆ ಅರ್ಜಿ ಸಲ್ಲಿಸದ, ಹೆಚ್ಚು ಹಣ ನೀಡಿದ ಗುತ್ತಿಗೆದಾರರಿಗೆ ನೀಡಿ ಅರ್ಹರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತುಂಡು ಗುತ್ತಿಗೆ ಕಾಮಗಾರಿ ನೀಡದ ಕಾರಣ ಗುತ್ತಿಗೆದಾರರು ಕಾಮಗಾರಿ ದೃಢೀಕರಣ ಪತ್ರ ಹಾಗೂ ಟರ್ನೋವರ್ ಕೊರತೆಯಿಂದಾಗಿ ಇ-ಪ್ರೊಕ್ಯೂರ್‌ಮೆಂಟ್ ಟೆಂಡರ್‌ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ವರುಣ ಕ್ಷೇತ್ರದ ಎಲ್ಲ ಕಾಮಗಾರಿಗಳಿಗೆ ಏಜೆನ್ಸಿ ಪಿಕ್ಸ್ ಮಾಡುವುದು, ಕಾಮಗಾರಿಗಳನ್ನು ನಿರ್ವಹಿಸುವುದು ಮುಖ್ಯಮಂತ್ರಿಗಳ ಸಂಬಂಧಿಯೂ ಆಗಿರುವ ವರುಣಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರಾಯನಹುಂಡಿ ರವಿ ಎಂದು ದೂರಿದರು.
ತಮಗೆ ಬೇಕಾದ ಗುತ್ತಿಗೆದಾರರ ಹೆಸರಿನಲ್ಲಿ ತಾವೇ ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಇವರು ನಿರ್ವಹಿಸುವ ಕಾಮಗಾರಿಯನ್ನು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡದೆ ಕಳಪೆಯಾಗಿದ್ದರೂ ಅಧಿಕಾರಿಗಳು ಬಿಲ್ ಮಾಡಿಕೊಡುತ್ತಾರೆ. ಎಸ್‌ಸಿ, ಎಸ್‌ಟಿ ವರ್ಗದವರಿಗೆ ಮೀಸಲಾದ ಕಾಮಗಾರಿಗಳನ್ನೂ ಇವರೇ ನಿರ್ವಹಿಸುತ್ತಾರೆ ಎಂದು ದೂರಿದರು.
ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಮೀಸಲಾದ ಅನುದಾನಕ್ಕೆ ಪ್ರತ್ಯೇಕ ಖಾತೆ ತೆರೆದಿಲ್ಲ. ಮುಖ್ಯಮಂತ್ರಿಗಳ ಸ್ವಕ್ಷೇತ್ರವಾದ ವರುಣ ವ್ಯಾಪ್ತಿಯ ಗ್ರಾಮ ಪಂಚಾಯಿತಿಯಲ್ಲಿಯೇ ಅತಿ ಹೆಚ್ಚು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಪ್ರತ್ಯೇಕ ಖಾತೆ ಹೊಂದದೆ ಅನ್ಯಾಯವೆಸಗಲಾಗುತ್ತಿದೆ. ಎಸ್‌ಸಿ, ಎಸ್‌ಟಿ ಕಾಮಗಾರಿಗಳಿಗೆ ಮೀಸಲಾದ ಅನುದಾನಕ್ಕೆ ಪ್ರತ್ಯೇಕ ಕ್ರಿಯಾ ಯೋಜನೆ ರೂಪಿಸದೆ ಎಸ್‌ಸಿ, ಎಸ್‌ಟಿ ಎರಡನ್ನು ಒಟ್ಟಿಗೆ ಸೇರಿಸಿ ಒಂದು ವರ್ಗಕ್ಕೆ ಅನ್ಯಾಯವೆಸಗುತ್ತಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳ ಸ್ವ ಕ್ಷೇತ್ರದಲ್ಲಿಯೇ ತುಂಡುಗುತ್ತಿಗೆ ಕಾಮಗಾರಿ ನೀಡುವಲ್ಲಿ ವ್ಯಾಪಕ ಭ್ರಷ್ಟಚಾರ ನಡೆದಿದೆ. ಸರ್ಕಾರಿ ಸವಲತ್ತು ಪಡೆಯಲು ಸ್ವಜಾತಿಯರು ಸಾಕು ಎಂಬಂತಾಗಿದೆ. ಕೂಡಲೇ ಎಸ್‌ಸಿ, ಎಸ್‌ಟಿಯವರಿಗೆ ಸರ್ಕಾರದ ಸವಲತ್ತು ನೀಡುವಲ್ಲಿ ತಾರತಮ್ಯ ಮಾಡುತ್ತಿರುವ, ತುಂಡು ಗುತ್ತಿಗೆ ಕಾಮಗಾರಿ ನೀಡುವಲ್ಲಿ ಅಕ್ರಮವೆಸಗುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ವೀರ ಕೇಸರಿ ಪಡೆ ಅಧ್ಯಕ್ಷ ಮಧುವನ ಚಂದ್ರು, ಕಾರ್ಯದರ್ಶಿ ಮಹದೇವು, ಗೌರವ ಸಲಹೆಗಾರ ಆಲಗೂಡು ಬಸವರಾಜು, ಕುಮಾರ್, ಪರಮೇಶ್ವರ್, ನಾಗರಾಜು, ರವೀಂದ್ರ ಇತರರು ಇದ್ದರು.