ಧಾರವಾಡ: ಜಗತ್ತು ಇಂದು ಭಾರತದತ್ತ ನೋಡುತ್ತಿದೆ. ಇದಕ್ಕೆ ಚಂದ್ರಯಾನ ನಿದರ್ಶನ. ವಿಶ್ವದ ಅನೇಕ ಸಮಸ್ಯೆಗಳಿಗೆ ಉತ್ತರ ಹುಡುಕುವಲ್ಲಿ ಭಾರತದ ಮಾನವ ಸಂಪನ್ಮೂಲ ಸಜ್ಜಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಭಾರತ ಗೌರವಯುತ ಸ್ಥಾನ ಪಡೆದುಕೊಳ್ಳಲಿದೆ ಎಂದು ನವದೆಹಲಿಯ ಇಂಡೋ ಫ್ರೆಂಚ್ ಸೆಂಟರ್ ಫಾರ್ ಪ್ರಮೋಶನ್ ಆಫ್ ಅಡ್ವಾನ್ಸ್ ರಿಸರ್ಚ್ನ ನಿರ್ದೇಶಕ ಪ್ರೊ. ನಿತಿನ್ ಶೇಟ್ ಹೇಳಿದರು.
ನಗರದ ಕರ್ನಾಟಕ ವಿಶ್ವವಿದ್ಯಾಲಯವು ಗಾಂಽ ಭವನದಲ್ಲಿ ಸೋಮವಾರ ಆಯೋಜಿಸಿದ್ದ 73ನೇ ಘಟಿಕೋತ್ಸವದ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶಿಯತೆಯನ್ನು ಆಧರಿಸಿದ ವಿಜ್ಞಾನ ಮತ್ತು ತಂತ್ರಜ್ಞಾನ ವೃದ್ಧಿಸಿಕೊಂಡು ಮಹತ್ವದ ಕೊಡುಗೆ ನೀಡುವ ಹೊಣೆ ಯುವ ಪೀಳಿಗೆಯ ಮೇಲಿದೆ. ದೇಶ ಉನ್ನತ ಸ್ಥಾನಕ್ಕೇರಲು ಯುವ ಶಿಕ್ಷಿತರು ದೇಶಿಯತೆ ಮತ್ತು ಸ್ವದೇಶಿ ಅನ್ವೇಷಣೆಗಳ ಮೂಲಕ ಕೊಡುಗೆ ನೀಡಬೇಕು. ಭಾರತೀಯ ಸಂಸ್ಕೃತಿಯಲ್ಲಿನ ಆಯುರ್ವೇದ, ಯೋಗ, ಸಂಗೀತ, ಕಲೆಯು ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳೆವಣಿಗೆಗೆ ಸಹಕಾರಿಯÁಗಿದೆ. ಇದನ್ನು ಆಧಾರವಾಗಿಟ್ಟುಕೊಂಡು ಅನ್ವೇಷಣೆಗಳ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.
ಕವಿವಿ ಕುಲಾಽಪತಿ ಹಾಗೂ ರಾಜ್ಯಪಾಲ ಥಾವರಚಂದ್ ಗೆಹಲೋತ್ ಮಾತನಾಡಿ, ದೇಶಿ ಜ್ಞಾನವನ್ನು ಮತ್ತೆ ಒರೆಗೆ ಹಚ್ಚುವಂತಾಗಬೇಕು. ಯುವಕರು ಉತ್ತಮ ಕೊಡುಗೆಯ ಮೂಲಕ ಏಕ್ ಭಾರತ್ ಶ್ರೇಷ್ಠ ಭಾರತ್ ಮತ್ತು ಆತ್ಮನಿರ್ಭರ ಭಾರತ ಕಟ್ಟಲು ಹಾಗೂ ಭಾರತ ವಿಶ್ವಗುರು ಸ್ಥಾನದಲ್ಲಿ ನಿಲ್ಲಿಸಲು ಶ್ರಮಿಸಬೇಕು ಎಂದರು.
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಮಾತನಾಡಿ, ವಿವಿಧ ಕ್ಷೇತ್ರಗಳ ಒಡಂಬಡಿಕೆಗಳು ಸಂಶೋಧನೆ ಮತ್ತು ತಾಂತ್ರಿಕ ಕೌಶಲ ವೃದ್ಧಿಗೆ ಸಹಾಯಕವಾಗಿದೆ. ಉನ್ನತ ಶಿಕ್ಷಿತರು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಕರ್ನಾಟಕ ವಿಶ್ವವಿದ್ಯಾಲಯದ ವರದಿ ವಾಚಿಸಿದರು. ಕುಲಸಚಿವರಾದ ಡಾ. ಚಂದ್ರಮ್ಮ ಎಂ. ಹಾಗೂ ಡಾ. ಸಿ. ಕೃಷ್ಣಮೂರ್ತಿ, ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ ಸದಸ್ಯರು ವೇದಿಕೆಯಲ್ಲಿದ್ದರು.
ಚಿನ್ನದ ಪದಕ, ಪದವಿ ಪ್ರದಾನ: ಘಟಿಕೋತ್ಸವದಲ್ಲಿ ೩,೫೮೧ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ, ೨೨,೮೮೨ ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ, ೪೮ ಕಾನೂನು ಪದವಿ, ೧೨೭ ಡಿಪ್ಲೋಮಾ ಪದವಿ, ೧೯೯ ಸರ್ಟಿಫಿಕೇಟ್ ಕೋರ್ಸ್ ಪದವಿ ಪ್ರದಾನ ಮಾಡಲಾಯಿತು. ವಿವಿಧ ಪದವಿಗಳಲ್ಲಿ ರ‍್ಯಾಂಕ್ ವಿಜೇತ ೧೦೯ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ೪೯ ವಿದ್ಯಾರ್ಥಿಗಳಿಗೆ ನಗದು ಪಾರಿತೋಷಕ, ೬೪ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಪ್ರದಾನ ಮಾಡಲಾಯಿತು. ರಾಜ್ಯಪಾಲರು ರ‍್ಯಾಂಕ್ ವಿಜೇತರಿಗೆ ಮಾತ್ರ ಚಿನ್ನದ ಪದಕ ಪ್ರದಾನ ಮಾಡಿದರು. ಈ ವೇಳೆ ಪಿಎಚ್.ಡಿ. ಪದವೀಧರರು ತಮಗೂ ರಾಜ್ಯಪಾಲರೇ ಪದವಿ ಪ್ರದಾನ ಮÁಡಬೇಕು ಎಂದು ಪಟ್ಟು ಹಿಡಿದರು. ಕುಲಪತಿ ಪ್ರೊ. ಗುಡಸಿ ಮನವೊಪ್ಪಿಸಲು ಯತ್ನಿಸಿದರು. ಪಿಎಚ್.ಡಿ ಪದವೀಧರರು ಪಟ್ಟು ಸಡಿಲಿಸದಿದ್ದಾಗ ರಾಜ್ಯಪಾಲರು ಒಪ್ಪಿ ಪಿಎಚ್.ಡಿ ಪ್ರದಾನ ಮಾಡಿದರು.
ಮೂವರಿಗೆ ಗೌರವ ಡಾಕ್ಟರೇಟ್: ಬಸವಣ್ಣನವರ ತತ್ವಗಳ ಪ್ರಚಾರ, ವಚನ ಸಾಹಿತ್ಯದಲ್ಲಿ ಅನುವಾದ ಸೇರಿ ಶರಣ ತತ್ವ ಪ್ರಚಾರಕ್ಕಾಗಿ ಕೊಡುಗೆ ನೀಡುತ್ತಿರುವ ಬಸವ ಸಮಿತಿಯ ರಾಜ್ಯಾಧ್ಯಕ್ಷ ಅರವಿಂದ ಜತ್ತಿ, ವಿದೇಶದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ವಿಶೇಷವಾಗಿ ಆರೋಗ್ಯ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಧಾರವಾಡ ಮೂಲದ ಅಮೆರಿಕದಲ್ಲಿ ನೆಲೆಸಿರುವ ಶಿಕ್ಷಣಪ್ರೇಮಿ ರವಿಶಂಕರ ಭೂಪಳಾಪೂರ ಹಾಗೂ ಗ್ರಾಮಗಳ ದತ್ತು ಸ್ವೀಕರಿಸಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಉದ್ಯಮಿ, ಶಿಕ್ಷಣಪ್ರೇಮಿ ಅರ್ಚನಾ ಸುರಾಣಾ ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.