ಮೈಸೂರು: ದೂರ ಶಿಕ್ಷಣ ಕಲಿಕೆಯಲ್ಲಿ ದೇಶದಲ್ಲೇ ಅತಿ ಹೆಚ್ಚು ಶೈಕ್ಷಣಿಕ ಕೋರ್ಸ್‌ಗಳನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ ಒಂದು ಲಕ್ಷ ಪ್ರವೇಶಾತಿ ಸಾಧಿಸಬೇಕು ಎಂಬ ಗುರಿ ಹೊಂದಲಾಗಿದೆ ಎಂದು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಹೇಳಿದರು.
2023ನೇ ಸಾಲಿನಲ್ಲಿ 43 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 2024ರ ಜನವರಿ ಆವೃತ್ತಿಯಲ್ಲಿ 17 ಸಾವಿರ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಜುಲೈ ಆವೃತ್ತಿಯಲ್ಲಿ 40 ಸಾವಿರಕ್ಕೂ ಹೆಚ್ಚಿನ ಪ್ರವೇಶಾತಿ ದೊರೆಯುವ ನಿರೀಕ್ಷೆ ಇದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ದೇಶದಲ್ಲಿ ದೂರ ಶಿಕ್ಷಣ ಕ್ಷೇತ್ರದ 17 ವಿವಿಗಳಿವೆ. ಈ ಪೈಕಿ ಇಗ್ನೋ ಬಿಟ್ಟರೆ ಅತಿ ಹೆಚ್ಚು ಕೋರ್ಸ್ ನಡೆಸುತ್ತಿರುವುದು ನಮ್ಮ ವಿವಿ ಮಾತ್ರ ಎಂದರು.
ಮುಕ್ತ ವಿವಿಗೆ ನ್ಯಾಕ್‌ನಿಂದ ಎ ಪ್ಲಸ್ ಮಾನ್ಯತೆ ದೊರೆತಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಅನೇಕ ಪ್ರಾದೇಶಿಕ ಕೇಂದ್ರಗಳನ್ನು ತೆರೆಯಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸ್ಟಡಿ ಸೆಂಟರ್ ತೆರೆಯಲಾಗಿದೆ.
ಯುಜಿಸಿ ಮಾನ್ಯತೆ ಪಡೆದಿರುವ 64 ಸ್ನಾತಕ/ಸ್ನಾತಕೋತ್ತರ ಪದವಿ, ಡಿಪ್ಲೋಮಾ ಶಿಕ್ಷಣ ಸಂಬಂಧ ಪ್ರವೇಶಾತಿ ನೀಡುತ್ತಿದ್ದು, ಇದರ ಜೊತೆಗೆ ಸಮಾಜ ಕಾರ್ಯ ಎಂಬಿಎ ವಿಭಾಗದಲ್ಲಿ ಆಸ್ಪತ್ರೆ ಮತ್ತು ಆರೋಗ್ಯ ಕಾಳಜಿ ನಿರ್ವಹಣೆ ಎಂಸಿಎ ಹಾಗೂ 10 ಆನ್‌ಲೈನ್ ಕೋರ್ಸ್ ಆರಂಭಿಸಲಾಗಿದೆ. ಪ್ರವೇಶಾತಿ ಚಾಲನೆಯಲ್ಲಿದ್ದು, ಅ.31ರವರೆಗೂ ಅವಕಾಶವಿದೆ ಎಂದರು.
ಶಿಕ್ಷಣ ಎಲ್ಲರಿಗೂ ಸಿಗಬೇಕೆಂಬ ಉದ್ದೇಶದಿಂದ ಮಹಿಳೆಯರಿಗೆ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್ ಬೋಧನಾ ಶುಲ್ಕದಲ್ಲಿ ರಿಯಾಯಿತಿ, ಮಿಲಿಟರಿ, ಮಾಜಿ ಸೈನಿಕರ ಮಕ್ಕಳು, ಆಟೋ, ಕ್ಯಾಬ್ ಚಾಲಕರು, ಅವರ ಪತಿ ಅಥವಾ ಪತ್ನಿ ಹಾಗೂ ಇಬ್ಬರು ಮಕ್ಕಳಿಗೂ ಶೇ.10ರಷ್ಟು ರಿಯಾಯಿತಿ ಇದೆ. ಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ ನೌಕರರಿಗೂ ಶುಲ್ಕದಲ್ಲಿ ಡಿಸ್ಕೌಂಟ್ ಇದೆ ಎಂದು ಶರಣಪ್ಪ ಹೇಳಿದರು. ಮುಕ್ತ ವಿವಿಯ ವಾರ್ಷಿಕ/ಸೆಮಿಸ್ಟರ್ ಪರೀಕ್ಷೆಗಳು ಮಡಿಕೇರಿ ಪ್ರಾದೇಶಿಕ ಕೇಂದ್ರದಲ್ಲೇ ನಡೆಯುತ್ತದೆ. ವಾರಾಂತ್ಯ ಸಂಪರ್ಕ ತರಗತಿ ಮತ್ತು ವಿಜ್ಞಾನ ವಿಷಯದ ಪ್ರಾಯೋಗಿಕ ತರಗತಿಗಳನ್ನೂ ಕಲಿಕಾರ್ಥಿ ಸಹಾಯ ಕೇಂದ್ರದಲ್ಲಿ ನಡೆಸಲಾಗುತ್ತದೆ ಎಂದು ಶರಣಪ್ಪ ವಿವರಿಸಿದರು.
ಯುಜಿಸಿ ನಿಯಮದ ಪ್ರಕಾರ ಪೂರ್ಣಾವಧಿಯಲ್ಲಿ (ಭೌತಿಕ ಶಿಕ್ಷಣ) ಒಂದು ಕೋರ್ಸ್ ಮತ್ತು ದೂರ ಶಿಕ್ಷಣದಲ್ಲಿ (ಕರಾಮುವಿವಿ) ಇನ್ನೊಂದು ಕೋರ್ಸ್ ಅನ್ನು ಏಕಕಾಲದಲ್ಲೇ ಮಾಡಲು ಅವಕಾಶವಿದೆ. ಪ್ರಸ್ತುತ ಈ ರೀತಿ ದ್ವಿ-ಪದವಿ ಬಯಸಿ 6,500 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಎಂದು ಪ್ರೊ.ಶರಣಪ್ಪ ತಿಳಿಸಿದರು.
ಯಾವುದೇ ವಿದ್ಯಾರ್ಥಿ ಇತರ ಕಾಲೇಜಿನಲ್ಲಿ ಮೊದಲ ವರ್ಷ ರೆಗ್ಯೂಲರ್ ಆಗಿ ಓದಿ, ಕಾರಣಾಂತರಗಳಿಂದ ಶಿಕ್ಷಣಕ್ಕೆ ತಡೆ ಆಗಿದ್ದರೆ 2ನೇ ವರ್ಷಕ್ಕೆ ನಮ್ಮಲ್ಲಿ ನೇರ ಪ್ರವೇಶ ಪಡೆಯಬಹುದು. ಆ ಮೂಲಕ ಅರ್ಧಕ್ಕೆ ನಿಂತ ಶಿಕ್ಷಣವನ್ನು ಪೂರ್ಣ ಗೊಳಿಸಬಹುದು ಎಂದು ಪ್ರೊ.ಶರಣಪ್ಪ ವಿವರಿಸಿದರು.
ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ಡೀನ್ ಡಾ.ಲಕ್ಷ್ಮೀ, ಪರೀಕ್ಷಾಂಗ ಕುಲಸಚಿವ ಡಾ. ವಿಶ್ವನಾಥ್, ಕುಲಪತಿ ವಿಶೇಷಾಧಿಕಾರಿ ಎಸ್.ಮಹದೇವು, ಮುಕ್ತ ವಿವಿ ಸ್ಪರ್ಧಾತ್ಮಕ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣ ಇತರರಿದ್ದರು.
ಕರ್ನಾಟಕ ರಾಜ್ಯ ಮುಕ್ತ ವಿವಿ ಹಾಗೂ ದೂರ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹೊರತಂದಿರುವ ‘ಮುಕ್ತ ವಿವಿ ಗೀತೆ’ಯನ್ನು ಅಧ್ಯಾತ್ಮ ಚಿಂತಕ ಶ್ರೀನಿವಾಸ ಅರ್ಕಾ ಬಿಡುಗಡೆಗೊಳಿಸಿದರು.‘ಕಲಿಬೇಕು ನೀ ಕಲಿಬೇಕು, ಮುಕ್ತವಾಗಿ ನೀ ಕಲಿಬೇಕು’ ಎಂದು ಆರಂಭವಾಗುವ ಗೀತೆಯನ್ನು ಸಿದ್ದೇಗೌಡ ರಚನೆ ಮಾಡಿದ್ದು, ನಾಗೇಶ್ ಕಂದಗಾಲ ಸಂಗೀತ ಸಂಯೋಜಿಸಿ ಹಾಡಿದ್ದಾರೆ.