ಜಿಲ್ಲೆ

ಚಿಕ್ಕಬಳ್ಳಾಪುರ ನಗರಸಭೆ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಮೆಚ್ಚುಗೆ

ಚಿಕ್ಕಬಳ್ಳಾಪುರ: ನಗರಸಭೆ ವ್ಯಾಪ್ತಿಯಲ್ಲಿ ಹಸಿರು ತ್ಯಾಜ್ಯ ವಿಲೇವಾರಿ ಮತ್ತು ರೈತರಿಗೆ ಉಚಿತವಾಗಿ ಗೊಬ್ಬರ ಪೂರೈಕೆಯ ವ್ಯವಸ್ಥೆ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಗರಾಭಿವೃದ್ಧಿ ಯೋಜನಾ ಪ್ರಭಾರ ನಿರ್ದೇಶಕಿ ಮಾಧವಿಗೆ ಡಿ.2 ರಂದು ಪತ್ರ ಬರೆದು, ಉತ್ತಮ ಕಾರ್ಯ ನಿರ್ವಹಣೆ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಗರಗಳಲ್ಲಿ ದಿನನಿತ್ಯ ಉತ್ಪಾದನೆಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ, ಸ್ವಚ್ಛ ಮತ್ತು ಸುಂದರ ವಾತಾವರಣ ನಿರ್ಮಿಸುವುದೇ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಪ್ರಮುಖ ಉದ್ದೇಶ. ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ದಿನನಿತ್ಯ ಉತ್ಪಾದನೆಯ ಹಸಿ ಕಸವನ್ನು ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ಸುತ್ತಮುತ್ತಲಿನ ರೈತರ ಜಮೀನಿನಲ್ಲಿ ನಿರ್ಮಿಸಿದ ಪಿಟ್ ಗಳಲ್ಲಿ ಗೊಬ್ಬರವನ್ನಾಗಿ ಪರಿವರ್ತಿಸುತ್ತಿರುವುದು ಶ್ಲಾನೀಯ ಎಂದು ತಿಳಿಸಿದ್ದಾರೆ.

ಇಲ್ಲಿನ ನಗರಸಭೆಯು ಭಾರತೀಯ ಮಾನವ ವಸಾಹತುಗಳ ಸಂಸ್ಥೆ (ಐಐಎಚ್ಎಸ್) ಮತ್ತು ಗ್ರೋದೇಜ್ ಪ್ರಾರ್ಪಟಿಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಕೈಗೊಂಡಿರುವ ನೈರ್ಮಲ್ಯ ರಕ್ಷಣೆ ಮತ್ತು ಕೃಷಿ ಲಾಭದಾಯಕ ವ್ಯವಸ್ಥಿತ ವಿಧಾನವನ್ನು ಅನುಸರಿಸುತ್ತಿದೆ.