ಕೊಳ್ಳೇಗಾಲ: ಒಗ್ಗಟ್ಟಾಗಿ ನಡೆದರೆ ಮಾತ್ರ ಗೆಲುವು ಸಾಧ್ಯ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ಪಟ್ಟಣದ ಹೊಸ ಅಣಗಳ್ಳಿಯಲ್ಲಿ ಸೋಮವಾರ ರೈತ ಸಂಘದ ನೂತನ ಶಾಖೆಗೆ ಚಾಲನೆ ನೀಡಿ ಮಾತನಾಡಿದರು.
ಕೆಲವರು ಧರ್ಮ, ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸುತ್ತಿದ್ದು, ಯಾರೂ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಿಲ್ಲದಂತಾಗಿದೆ. ಆದ್ದರಿಂದ ಸಂವಿಧಾನದ ಆಶಯಗಳನ್ನು ಅನುಷ್ಠಾನಗೊಳಿಸಬೇಕಿದೆ. ಸಂವಿಧಾನವು ನಮಗೆ ಘನತೆ, ಗೌರವದಿಂದ ಬದುಕುವ ಶಕ್ತಿ ನೀಡಿದೆ. ಪ್ರಶ್ನಿಸುವ ಹಕ್ಕನ್ನು ನೀಡಿದೆ. ಹೀಗಾಗಿ 36 ವರ್ಷಗಳಿಂದಲೂ ರೈತ ಸಂಘ ಅನ್ಯಾಯದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದೆ ಎಂದರು.
ಇಂದು ಆಳುವ ಸರ್ಕಾರ ಬಂಡವಾಳಶಾಹಿಗಳ ಪರವಾಗಿದೆ. ಮಧ್ಯಮ ವರ್ಗದ ಜನರು ಬಡವರಾಗುತ್ತಿದ್ದಾರೆ. ಬಡವರು ಭಿಕ್ಷುಕರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಇದೇ ವೇಳೆ ಹೊಸ ಅಣಗಳ್ಳಿಯಲ್ಲಿ ಯುವ ರೈತ ಕೀರ್ತಿರಾಜ್ ನೇತೃತ್ವದಲ್ಲಿ ಮಹಿಳಾ ರೈತರು ಸೇರಿದಂತೆ 30ಕ್ಕೂ ಹೆಚ್ಚು ರೈತರು ರೈತ ಸಂಘಕ್ಕೆ ಸೇರ್ಪಡೆಗೊಂಡರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮಹೇಶ್ ಪ್ರಭು, ಜಿಲ್ಲಾ ಕಾರ್ಯಧ್ಯಕ್ಷ ಶೈಲೇಂದ್ರ, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಜಿಲ್ಲಾ ಮಹಿಳಾ ಸಂಘದ ಅಧ್ಯಕ್ಷೆ ಮಾದಮ್ಮ, ತಾಲೂಕು ಘಟಕದ ಕಾರ್ಯಾಧ್ಯಕ್ಷ ಡಾ.ಜೋಯೆಲ್ ನಿವಾಸ್, ಉಪಾಧ್ಯಕ್ಷ ಚಾರ್ಲಿ, ತಾಲೂಕು ಕಾರ್ಯದರ್ಶಿ ಪೆರಿಯಾನಾಯಗಂ, ಯುವ ಘಟಕದ ಅಧ್ಯಕ್ಷ ವಾಸು, ಜಾನ್ ಕೆನ್ನಡಿ, ಮುಖಂಡರಾದ ದೊರೆಸ್ವಾಮಿ, ಮಾದೇವ, ನಂಜುಂಡಮೂರ್ತಿ, ಕೀರ್ತಿರಾಜ್ ಮತ್ತಿತರರಿದ್ದರು.