ಚಿಕ್ಕಬಳ್ಳಾಪುರ: ಪ್ರವಾಸಿತಾಣ ನಂದಿ ಗಿರಿಧಾಮದಲ್ಲಿ ಜು.2ರಂದು ರಾಜ್ಯ ಸಚಿವ ಸಂಪುಟ ಸಭೆಗೆ ಮತ್ತೆ ಜಿಲ್ಲಾಡಳಿತ ಸಿದ್ಧತೆ ಪ್ರಾರಂಭಿಸಿದೆ.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ವಾಸ್ತವ್ಯ, ಆಸನ, ಭದ್ರತೆ ಸೇರಿ ವಿವಿಧ ವ್ಯವಸ್ಥೆಗಳ ಬಗ್ಗೆ ಚರ್ಚಿಸಲಾಯಿತು.
ಜು.2ರಂದು ಮಧ್ಯಾಹ್ನ 12ಕ್ಕೆ ನಂದಿ ಗಿರಿಧಾಮದ ಮಯೂರ ಸಭಾಂಗಣದಲ್ಲಿ ರಾಜ್ಯ ಸಚಿವ ಸಂಪುಟದ 14ನೇ ಸಭೆ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯ ಸಚಿವರು ಹಾಗೂ ವಿವಿಧ ಇಲಾಖೆಗಳು ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸಂಪುಟ ಸಭೆ ನಡೆಯುವ ಜಾಗದಲ್ಲಿ ಸಭಾ ವೇದಿಕೆ ಸಜ್ಜು, ಗಣ್ಯರ ವ್ಯಾಸ್ತವ್ಯ, ಕುಡಿಯುವ ನೀರು, ಊಟ ತಿಂಡಿ, ಸ್ವಚ್ಛತೆ ಸೇರಿ ಮತ್ತೊಮ್ಮೆ ಎಲ್ಲ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು. ಈ ಹಿಂದೆ ಜೂ.19ಕ್ಕೆ ಸಭೆ ನಿಗದಿಯಾಗಿದ್ದ ಸಂದರ್ಭದಲ್ಲಿಯೇ ಶೇ.90 ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ. ಆದರೆ, ಕೊನೇ ಕ್ಷಣದಲ್ಲಿ ಸಭೆಯನ್ನು ಜು.2ಕ್ಕೆ ಮುಂದೂಡಲಾಗಿದೆ. ಇದರಿಂದ ನಿಗದಿತ ದಿನದಂದು ಸಂಚಾರ ದಟ್ಟಣೆ, ಪೊಲೀಸ್ ಭದ್ರತೆ, ಸುಗಮವಾಗಿ ಕ್ಯಾಬಿನೆಟ್ ಸಭೆ ನಿರ್ವಹಣೆಗೆ ಸೌಕರ್ಯ ಒದಗಿಸುವ ಬಗ್ಗೆಯೂ ಚರ್ಚಿಸಲಾಗಿದೆ.
* ಮುಂಜಾಗ್ರತಾ ಕ್ರಮವಾಗಿ ನಿರ್ಬಂಧ
ನಂದಿಬೆಟ್ಟ, ನಂದಿಯ ಶ್ರೀ ಭೋಗನಂದೀಶ್ವರ ಸ್ವಾಮಿ ಹಾಗೂ ಶ್ರೀ ಯೋಗ ನಂದೀಶ್ವರ ಸ್ವಾಮಿ ದೇಗುಲಕ್ಕೆ ಜನರ ಪ್ರವೇಶ, ವಸತಿ ಕೊಠಡಿಗಳ ಕಾಯ್ದಿರಿಸುವಿಕೆಗೆ ನಿಷೇಧ ಸೇರಿ ಹಲವು ರ್ನಿಬಂಧ ಹೇರಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜೂ.30ರ ಬೆಳಗ್ಗೆ 6 ಗಂಟೆಯಿಂದ ಜು.3ರ ಮಧ್ಯಾಹ್ನ 2 ಗಂಟೆಯವರೆಗೆ ಪ್ರವಾಸಿಗರಿಗೆ ಹಾಗೂ ವಾಹನಗಳ ಪ್ರವೇಶಕ್ಕೆ ನಿರ್ಬಂಧಿಸಿ ಆದೇಶಿಸಲಾಗಿದೆ. ಸ್ಕಂದಗಿರಿ ಬೆಟ್ಟದ ಚಾರಣಕ್ಕೂ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.