ಜಿಲ್ಲೆ

ಚಿಕ್ಕಬಳ್ಳಾಪುರ ಸೇರಿದಂತೆ ಬಯಲುಸೀಮೆ ಭಾಗಕ್ಕೆ ಕಾಂಗ್ರೆಸ್‌ ಬಜೆಟ್‌ನಲ್ಲಿ ಮಹಾ ಅನ್ಯಾಯ: ಸಂಸದ ಸುಧಾಕರ್‌ ಆಕ್ರೋಶ

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್‌ ಸಂಖ್ಯೆಯಲ್ಲಿ ದಾಖಲೆಯಾಗಿದೆಯೇ ಹೊರತು, ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ದಾಖಲೆ ಸೃಷ್ಟಿಸಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ಬಯಲುಸೀಮೆ ಭಾಗಕ್ಕೆ ಈ ಬಜೆಟ್‌ ದೊಡ್ಡ ವಂಚನೆ ಮಾಡಿದೆ. ಜತೆಗೆ ಕೇಂದ್ರದ ತಾರತಮ್ಯ ಎಂಬ ಸವಕಲು ನಾಣ್ಯವನ್ನೇ ಮತ್ತೆ ತೋರಿಸಲಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್‌ ಟೀಕಿಸಿದ್ದಾರೆ.

4 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ ಮಂಡಿಸಿದರೂ ಅದರಲ್ಲಿ ಬಹುಪಾಲು ಅಂದರೆ 51,034 ಕೋಟಿ ರೂ. ಅನುದಾನವನ್ನು ಗ್ಯಾರಂಟಿಗಳಿಗೆ ಮೀಸಲಿಡಲಾಗಿದೆ. ಇದರಿಂದಾಗಿ ಅಭಿವೃದ್ಧಿ ಯೋಜನೆಗಳಿಗೆ ಹಣ ಕಡಿಮೆಯಾಗಿದೆ. ಈ ತಪ್ಪನ್ನು ಮುಚ್ಚಿಡಲು ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬುದನ್ನೇ ಮತ್ತೆ ಬಜೆಟ್‌ನಲ್ಲಿ ಆರೋಪಿಸಲಾಗಿದೆ. ಕರ್ನಾಟಕ ವಿತ್ತೀಯ ಶಿಸ್ತನ್ನು ಪಾಲಿಸಿದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ. ಆದರೆ ನೌಕರರಿಗೆ ಸಂಬಳ ಕೊಡಲು, ಗುತ್ತಿಗೆದಾರರ ಬಿಲ್‌ ಪಾವತಿಸಲು ಹಣವಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಇದನ್ನೇ ವಿತ್ತೀಯ ಶಿಸ್ತು ಎಂದು ಕಾಂಗ್ರೆಸ್‌ ಸರ್ಕಾರ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದೆ ಎಂದು ಅವರು ದೂರಿದ್ದಾರೆ.

ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಬಯಲಸೀಮೆ ಭಾಗಕ್ಕೆ ಮಹಾ ಅನ್ಯಾಯವನ್ನು ಕಾಂಗ್ರೆಸ್‌ ಸರ್ಕಾರ ನೀಡಿದೆ. ಇಲ್ಲಿನ ನೀರಾವರಿಗೆ ಸಂಬಂಧಿಸಿದಂತೆ ಹೊಸ ಯೋಜನೆ ನೀಡಿಲ್ಲ. ರೇಷ್ಮೆ ಕ್ಷೇತ್ರದಲ್ಲಿ ರಾಮನಗರ, ಮೈಸೂರು ಜಿಲ್ಲೆಗಳಿಗೆ ಕೆಲವು ಕೊಡುಗೆಗಳನ್ನು ನೀಡಲಾಗಿದೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮೊದಲಾದ ಭಾಗಗಳಲ್ಲೂ ರೇಷ್ಮೆ ಮಾರುಕಟ್ಟೆ ಅಭಿವೃದ್ಧಿಗೆ ಅನುದಾನ ಅಥವಾ ಯೋಜನೆ ನೀಡಬೇಕಿತ್ತು ಎಂದು ಅವರು ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸುಸಜ್ಜಿತ ಮೆಡಿಕಲ್‌ ಕಾಲೇಜನ್ನು ಬಿಜೆಪಿ ಅವಧಿಯಲ್ಲಿ ನಿರ್ಮಿಸಲಾಗಿತ್ತು. ಈ ಕಾಲೇಜಿನ ಆರಂಭಕ್ಕೆ ಇನ್ನಷ್ಟು ಅನುದಾನದ ಕುರಿತು ಬಜೆಟ್‌ನಲ್ಲಿ ಹೇಳಿಲ್ಲ. ಎಚ್‌ಎನ್‌ ವ್ಯಾಲಿ ಯೋಜನೆ ನೀರಿನ ಮೂರನೇ ಹಂತರ ಶುದ್ಧೀಕರಣ, ಕೆರೆಗಳ ರಕ್ಷಣೆಗೆ ಕ್ರಮ ಸೇರಿದಂತೆ ಯಾವುದೇ ಯೋಜನೆಗಳನ್ನು ನೀಡಿಲ್ಲ ಎಂದು ಅವರು ದೂರಿದ್ದಾರೆ.

*ಬಿಜೆಪಿಯ ಯೋಜನೆ*

ಚಿಕ್ಕಬಳ್ಳಾಪುರದಲ್ಲಿ ಹೈಟೆಕ್‌ ಹೂ ಮಾರುಕಟ್ಟೆಯ ಬಗ್ಗೆ ಪ್ರಸ್ತಾಪಿಸಲಾಗಿದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯ ಬಜೆಟ್‌ನಲ್ಲೇ ಇದನ್ನು ಘೋಷಿಸಲಾಗಿತ್ತು. ಅದನ್ನೇ ಜಾರಿ ಮಾಡಿದ್ದರೆ ಆಗುತ್ತಿತ್ತು. ಅದನ್ನು ಬಿಟ್ಟು ಮತ್ತೆ ಈ ಯೋಜನೆ ಘೋಷಣೆ ಮಾಡಲಾಗಿದೆ. ಬಿಜೆಪಿ ಯೋಜನೆಗೆ ಕಾಂಗ್ರೆಸ್‌ ಬಣ್ಣ ಬಳಿಯಲಾಗಿದೆ ಎಂದು ಡಾ.ಕೆ.ಸುಧಾಕರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಂದಿನಿ ಬ್ರ್ಯಾಂಡ್‌ನ್ನು ವಿಸ್ತರಿಸಿದ್ದೇವೆ ಎಂದು ಹೇಳಿಕೊಳ್ಳಲಾಗಿದೆ. ಆದರೆ ಸುಮಾರು 600 ಕೋಟಿ ರೂ. ಹಾಲಿನ ಪ್ರೋತ್ಸಾಹಧವನ್ನೇ ರೈತರಿಗೆ ನೀಡಿಲ್ಲ. ಎತ್ತಿನಹೊಳೆ ಯೋಜನೆಯಡಿ ತುಮಕೂರಿನಲ್ಲಿ ಕಾಮಗಾರಿ ಪೂರ್ಣಗೊಳಿಸುವುದರ ಬಗ್ಗೆ ಮಾತ್ರ ಪ್ರಸ್ತಾಪ ಮಾಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಈ ಯೋಜನೆ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಅನುದಾನ ಕೂಡ ನೀಡಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

*SCSP/TSP ಹಣ ಮೀಸಲಿಡಿ*

ಈ ಬಾರಿ SCSP/TSP ಅಡಿಯಲ್ಲಿ ಒಟ್ಟು 42,018 ಕೋಟಿ ರೂ. ಮೀಸಲಿಡಲಾಗಿದೆ. ಆದರೆ ಮುಂದೆ ಈ ಹಣವನ್ನು ಗ್ಯಾರಂಟಿಗಳಿಗೆ ಬಳಸಲಾಗುತ್ತದೆಯೇ ಎಂದು ಖಚಿತವಾಗಿ ತಿಳಿಸಿಲ್ಲ. ಈಗ ಮೀಸಲಿಟ್ಟು ನಂತರ ಅನುದಾನ ವರ್ಗಾವಣೆ ಮಾಡಬಾರದು ಎಂದು ಡಾ.ಕೆ.ಸುಧಾಕರ್‌ ಆಗ್ರಹಿಸಿದ್ದಾರೆ.