ಜಿಲ್ಲೆ

ಮೈತ್ರಿ ಲೋಕಸಭೆಗಷ್ಟೇ ಸೀಮಿತವಲ್ಲ: ಬಿ.ವೈ. ವಿಜಯೇಂದ್ರ ಭೇಟಿ ವೇಳೆ ಅಮಿತ್ ಷಾ ಸ್ಪಷ್ಟೋಕ್ತಿ

ನವದೆಹಲಿ: ರಾಜ್ಯ ಬಿಜೆಪಿಯ ಕೆಲ ನಾಯಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವುದು, ಹೇಳಿಕೆ ನೀಡುತ್ತಿರುವುದನ್ನೆಲ್ಲಾ ಗಮನಿಸಿದ್ದೇವೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಮುಂದಿನ ದಿನಗಳಲ್ಲಿ ಅವೆಲ್ಲವನ್ನೂ ಸರಿಪಡಿಸಲಾಗುವುದು. ಪಕ್ಷದಲ್ಲಿ ಶಿಸ್ತನ್ನು ಹೆಚ್ಚಿಸುವತ್ತ ನೀವು ಶ್ರಮಿಸಿ ಎಂದು ಗೃಹ ಸಚಿವ ಅಮಿತ್ ಷಾ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರಗೆ ನಿರ್ದೇಶನ ನೀಡಿದ್ದಾರೆ.

ದೆಹಲಿಯ ಸಂಸತ್ ಭವನದಲ್ಲಿ ಗೃಹ ಸಚಿವರನ್ನು ಭೇಟಿಯಾದ ವೇಳೆ ವಿಜಯೇಂದ್ರ ರಾಜ್ಯ ಬಿಜೆಪಿ, ಲೋಕಸಭೆ ಚುನಾವಣೆ, ಪದಾಧಿಕಾರಿಗಳ ನೇಮಕ ಸೇರಿ ಹಲವು ವಿಷಯಗಳ ಬಗ್ಗೆ ರ್ಚಚಿಸಿದರು. ಈ ವೇಳೆ ಪಕ್ಷದಲ್ಲಿ ಶಿಸ್ತು ಮುಖ್ಯ. ಕಾರ್ಯಕರ್ತರು, ಮುಖಂಡರು ಎಲ್ಲರೂ ಶಿಸ್ತಿನ ಗೆರೆ ದಾಟಿ ನಡೆದುಕೊಳ್ಳಬಾರದು. ಎಲ್ಲರೂ ಇದನ್ನು ಅರಿತು ಮುನ್ನಡೆಯುವಂತೆ ನೀವು ಕೆಲಸ ಮಾಡಿ ಎಂದು ಷಾ ಸಲಹೆ ನೀಡಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿ ಕೇವಲ ಮೇಲ್ನೋಟಕ್ಕೆ ಮಾತ್ರ ಎಂಬ ಅಭಿಪ್ರಾಯ ಯಾರಲ್ಲೂ ಮೂಡಬಾರದು. ಮೈತ್ರಿ ಬಿಗಿಯಾಗಿರುವಂತೆ ನೋಡಿಕೊಳ್ಳಬೇಕು. ಈ ಮೈತ್ರಿ ಕೇವಲ ಲೋಕಸಭೆ ಚುನಾವಣೆಗೆ ಸೀಮಿತ ಅಲ್ಲ. ವಿಧಾನ ಪರಿಷತ್, ವಿಧಾನಸಭೆ ಚುನಾವಣೆಗೂ ವಿಸ್ತರಣೆಯಾಗಬೇಕು. ಪರಸ್ಪರ ನಂಬಿಕೆಗೆ ಹಾನಿಯಾಗದಂತೆ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಅರಿವು ಮೂಡಿಸಬೇಕು. ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂಬ ಭಾವನೆ ಮೂಡಬೇಕು. ಮೈತ್ರಿಯಿಂದ ಹೆಚ್ಚು ಲಾಭವಾಗುವಂತೆ ನೋಡಿಕೊಳ್ಳಬೇಕು ಎಂದೂ ಅಮಿತ್ ಷಾ ಅವರು ವಿಜಯೇಂದ್ರ ಅವರಿಗೆ ಸಲಹೆ ಕೊಟ್ಟಿದ್ದಾರೆ. ಸೀಟು ಹಂಚಿಕೆ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡಲಿದ್ದೇವೆ. ಎಷ್ಟು ಸೀಟು ಬಿಟ್ಟುಕೊಡಬೇಕು ಎಂಬ ಬಗ್ಗೆ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದೂ ಷಾ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯ ಬಿಜೆಪಿ ಪದಾಧಿಕಾರಿಗಳ ನೇಮಕ ಜನವರಿ ಮೊದಲ ವಾರದೊಳಗೆ ಅಂತಿಮಗೊಳಿಸಲಾಗುವುದು. ಸಂಘಟನೆ ಬಲಪಡಿಸುವ ಜತೆಗೆ ರಾಜ್ಯದ ಜನತೆಗೆ ಕೇಂದ್ರ ಸರ್ಕಾರದ ಯೋಜನೆ ಮತ್ತು ಅವು ಹೇಗೆ ಪರಿಣಾಮಕಾರಿಯಾಗಿ ಜನರನ್ನು ತಲುಪಿವೆ ಎಂಬ ಬಗ್ಗೆ ಮನವರಿಕೆ ಮಾಡುತ್ತಿರಬೇಕು. ವಿಕಸಿತ ಭಾರತದ ಬಗ್ಗೆ ವ್ಯವಸ್ಥಿತ ಪ್ರಚಾರ ಮಾಡಬೇಕು. ಕಾರ್ಯಕರ್ತರು ಮತ್ತು ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಗಬೇಕು ಎಂದು ಷಾ, ವಿಜಯೇಂದ್ರಗೆ ತಿಳಿಸಿದ್ದಾರೆ.

ಪಿಎಂಗೆ ಗೆಲ್ಲುವ ಭರವಸೆ

ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿ.ವೈ. ವಿಜಯೇಂದ್ರ ಭೇಟಿ ಮಾಡಿದ್ದಾರೆ. ದೆಹಲಿಯ ಸಂಸತ್ ಭವನದಲ್ಲಿ ಪ್ರಧಾನಿಯನ್ನು ಭೇಟಿ ಮಾಡಿದ ವಿಜಯೇಂದ್ರ, ಕೊಟ್ಟಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸೀಟುಗಳನ್ನು ಗೆದ್ದು, ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದಾರೆಂದು ಆಪ್ತ ಮೂಲಗಳು ತಿಳಿಸಿವೆ.

ಮೋದಿ-ದೇವೇಗೌಡ ಮೀಟಿಂಗ್

ಸಂಸತ್ ಭವನದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್​ಡಿ ಕುಮಾರಸ್ವಾಮಿ, ಶಾಸಕ ಎಚ್​ಡಿ ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಆರಂಭಿಕ ಮಾತುಕತೆ ವೇಳೆ ದೇವೇಗೌಡ ಮತ್ತು ಕುಮಾರಸ್ವಾಮಿ ಜತೆಗಷ್ಟೇ ಮೋದಿ ಮಾತುಕತೆ ನಡೆಸಿದರು. ನಂತರ, ರೇವಣ್ಣ ಮತ್ತು ಪ್ರಜ್ವಲ್ ಜತೆಗೂ ಉಭಯ ಕುಶಲೋಪರಿ ಹಂಚಿಕೊಂಡರು. ರಾಜ್ಯದಲ್ಲಿ ಬಿಜೆಪಿ ಜತೆಗೆ ಮೈತ್ರಿ ಘೊಷಣೆಯಾದ ಬಳಿಕ ಕುಮಾರಸ್ವಾಮಿ ಮೊದಲ ಬಾರಿಗೆ ಪ್ರಧಾನಿಯವರನ್ನು ಭೇಟಿ ಮಾಡಿದ್ದು, ಸೌಹಾರ್ದ ಮಾತುಕತೆ ನಡೆದಿದೆ ಎಂದು ತಿಳಿದುಬಂದಿದೆ. ಸೀಟು ಹಂಚಿಕೆ ಬಗ್ಗೆ ಪ್ರಧಾನಿ ಜತೆಗೆ ಚರ್ಚೆಯಾಗಿಲ್ಲ ಮತ್ತು ಈ ವಿಷಯಗಳ ಬಗ್ಗೆ ಪ್ರಧಾನಿ ಜತೆ ಮಾತನಾಡುವುದು ಶಿಷ್ಟಾಚಾರವೂ ಅಲ್ಲ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ರಾಜಕೀಯ ವಿಷಯಗಳ ಬಗ್ಗೆ ಅಮಿತ್ ಷಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜತೆ ಪ್ರತ್ಯೇಕ ಮಾತುಕತೆ ನಡೆಯಲಿದೆ ಎಂದು ಹೇಳಲಾಗಿದೆ. ಉಭಯ ಪಕ್ಷಗಳ ಮೈತ್ರಿ ಬಗ್ಗೆ ಎರಡೂ ಪಕ್ಷಗಳ ಕೆಲ ನಾಯಕರು, ಕಾರ್ಯಕರ್ತರಲ್ಲಿ ಅಸಮಾಧಾನ, ಬೇಸರವಿರುವ ಹಿನ್ನೆಲೆಯಲ್ಲಿ ತಮ್ಮ ರಾಜ್ಯ ಘಟಕಗಳಿಗೆ ಇದು ಬಿಗಿಯಾದ ಮೈತ್ರಿ ಎಂಬ ಸಂದೇಶ ರವಾನೆ ಮಾಡುವ ದೃಷ್ಟಿಯಿಂದ ಈ ಭೇಟಿ ಮಹತ್ವ ಪಡೆದುಕೊಂಡಿದೆ ಎಂದು ವಿಶ್ಲೇಷಿಸಲಾಗಿದೆ. ಜೆಡಿಎಸ್ ಮುಖಂಡರು ಪ್ರಧಾನಿಯವರನ್ನು ಭೇಟಿಯಾಗಿ ವಾಪಸಾದ ಬಳಿಕ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಅವರು ದೇವೇಗೌಡರ ನಿವಾಸಕ್ಕೆ ತೆರಳಿ, ಮಾತುಕತೆ ನಡೆಸಿದರು.

ಚುನಾವಣೆ ಸ್ಪರ್ಧಿಸಬೇಕೆಂಬ ಒತ್ತಾಯವಿದೆ

ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ವಿಚಾರ ಸದ್ಯಕ್ಕೆ ನನ್ನ ಮುಂದಿಲ್ಲ. ಆದರೆ, ನಾನು ದೆಹಲಿಗೆ ಬರಬೇಕು ಎನ್ನುವುದು ಹಲವರ ಬಯಕೆ, ಒತ್ತಾಯ. ಬಿಜೆಪಿ ಸ್ನೇಹಿತರು ಕೂಡ ಈ ಸಲಹೆ ನೀಡಿದ್ದಾರೆ. ಸಮಯ ಬಂದಾಗ ಆ ಬಗ್ಗೆ ತೀರ್ಮಾನ ಮಾಡುತ್ತೇನೆ. ಸದ್ಯ ರಾಜ್ಯದಲ್ಲೇ ಇರಲು ಇಷ್ಟಪಡುತ್ತೇನೆ ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಎಷ್ಟು ಸೀಟನ್ನು ಗೆಲ್ಲುತ್ತೇವೆಯೋ ಅಷ್ಟು ಸೀಟನ್ನು ಕೇಳಲಿದ್ದೇವೆ. ಪುತ್ರ ನಿಖಿಲ್ ಕುಮಾರ್ ಸ್ವಾಮಿ ಸಂಸತ್ ಚುನಾವಣೆಗೆ ಸ್ಪರ್ಧೆ ಮಾಡುವ ಪ್ರಶ್ನೆ ಇಲ್ಲ. ಆ ಚಿಂತನೆಯೂ ಮಾಡಿಲ್ಲ. ಮಂಡ್ಯದಲ್ಲಿ ನಿಲ್ಲಲಿ ಎಂದು ಜನ ಹೇಳುತ್ತಿದ್ದಾರೆ. 28 ಕ್ಷೇತ್ರಗಳಲ್ಲಿ ಆತ ಪ್ರಚಾರ ಮಾಡಲಿದ್ದಾನೆ. ಮಂಡ್ಯದಲ್ಲಿ ಎರಡು ಬಾರಿ ಸೋತ ಅನುಕಂಪವಿದೆ ಎಂದರು.

ಕುಮಾರಸ್ವಾಮಿ ಮುಂದೆ ಕೇಂದ್ರ ಮಂತ್ರಿ ಆಗುತ್ತಾರೋ ಇಲ್ಲವೋ ಗೊತ್ತಿಲ್ಲ. ಯಾರ ಹಣೆ ಮೇಲೆ ಏನು ಬರೆದಿದೆ ಯಾರಿಗೊತ್ತು? ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಮೊನ್ನೆ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆ ನಂತರ ಬಿಜೆಪಿ ಸರ್ಕಾರದಲ್ಲಿ ಮೂವರು ಹೊಸಬರು ಸಿಎಂಗಳಾಗಿದ್ದಾರೆ. ಹಾಗಾಗಿ ರಾಜಕೀಯದಲ್ಲಿ ಯಾವಾಗ ಬೇಕಾದ್ರು ಏನು ಬೇಕಾದರೂ ಆಗಬಹುದು ಎಂದು ಹೇಳಿದರು. ಜೆಡಿಎಸ್-ಬಿಜೆಪಿ ಮಧ್ಯೆ ಹೊಂದಾಣಿಕೆ ಮೂಡá-ವುದು ಮುಖ್ಯ. ಒಂದು ಸೀಟು ಹೆಚ್ಚು- ಕಡಿಮೆಯಾದರೂ ಸಮಸ್ಯೆಯಿಲ್ಲ. ವಿಶ್ವಾಸವಿರಬೇಕು ಅಷ್ಟೇ. ಅದನ್ನ ನಾವು ಉಳಿಸಿಕೊಳ್ಳಬೇಕು. ಸೀಟು ಹಂಚಿಕೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಗಳ ಬಗ್ಗೆ ಜನವರಿ ಅಂತ್ಯದ ಒಳಗೆ ನಿರ್ಧಾರವಾಗಲಿದೆ ಎಂದರು.

ಪ್ರತಾಪಸಿಂಹಗೆ ಬೆಂಬಲ: ಸಂಸತ್ ಭದ್ರತಾ ಲೋಪಕ್ಕೆ ಸಂಬಂಧಿಸಿದ ಮೈಸೂರು ಸಂಸದ ಪ್ರತಾಪ್ ಸಿಂಹ ಪಾಸ್ ನೀಡಿದ್ದನ್ನು ಸಮರ್ಥಿಸಿದ ಕುಮಾರಸ್ವಾಮಿ, ಪಾಸ್ ನೀಡುವುದು ಸರ್ವೆ ಸಾಮಾನ್ಯ. ಭಯೋತ್ಪಾದನೆಗೆ ಪಾಸ್ ತೆಗೆದುಕೊಂಡಿದ್ದಾನೆಂದು ಕನಸು ಬೀಳುತ್ತಾ? ಕರ್ನಾಟಕದ ಕಲಾಪದಲ್ಲಿ ಅನಾಮಿಕ ವ್ಯಕ್ತಿ ಕುಳಿತುಕೊಂಡಿದ್ದ. ಅದನ್ನು ಯಾಕೆ ಕಾಂಗ್ರೆಸ್​ನವರು ಪ್ರಶ್ನಿಸಿಲ್ಲ? ನಾವು ಇದೇ ರೀತಿ ರಾಜ್ಯದಲ್ಲಿ ಗಲಾಟೆ ಮಾಡಿದೆವಾ ಎಂದು ಕುಟುಕಿದರು.

ಕೇಂದ್ರದ ಸಮರ್ಥನೆ : ಬರಗಾಲಕ್ಕೆ ಕೇಂದ್ರ ನೆರವು ಇನ್ನೂ ನೀಡಿಲ್ಲ ಎಂಬ ಟೀಕೆಗೆ ಉತ್ತರಿಸಿದ ಅವರು, ಹಿಂದೆ ಯಾವುದೇ ಬರಗಾಲದ ಸಂದರ್ಭದಲ್ಲಿ ಕೇಂದ್ರ 18000 ಕೋಟಿ ರೂ. ಕೊಟ್ಟ ಉದಾಹರಣೆ ಇದೆಯೇ? ಬರ ಇದೆಯೆಂದು ಅಷ್ಟು ದುಡ್ಡನ್ನು ಕೇಂದ್ರ ಸರ್ಕಾರ ಕೊಡಲು ಸಾಧ್ಯವೇ? ವಿಶೇಷ ಅನುದಾನ ಎಂದು ಕೆಲವೊಮ್ಮೆ ಕೊಡುತ್ತಾರೆ. ಆದರೆ ಎಲ್ಲವನ್ನೂ ಕೇಂದ್ರ ಸರ್ಕಾರ ಕೊಡಲಾಗಲ್ಲ. ರಾಜ್ಯ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.

ಗೌಡರ ಜತೆ ಭಾವನಾತ್ಮಕ ಸಂಬಂಧ

ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಸುದೀರ್ಘ ಸಭೆ ನಡೆಸಿದ್ದೇವೆ. ಪ್ರಧಾನಿಯವರಿಗೆ ದೇವೇಗೌಡರ ಜತೆ ಭಾವನಾತ್ಮಕ ಸಂಬಂಧವಿದೆ. ಇವತ್ತಿನ ಅವರ ನಡವಳಿಕೆ ಅದನ್ನು ಎತ್ತಿತೋರಿಸುತ್ತದೆ. ನಮ್ಮ ಕುಟುಂಬದ ಬಗ್ಗೆ ಪ್ರಧಾನಿಯವರಲ್ಲಿ ವಿಶ್ವಾಸವಿದೆ. ನಾನು ಸಿಎಂ ಆಗಿದ್ದಾಗಲೂ ಹಲವು ಭಾರಿ ಭೇಟಿ ಮಾಡಿದ್ದೆ. ಗುರುವಾರದ ಸಭೆ ವೇಳೆ ರಾಜ್ಯದ ಕಾಡುಗೊಲ್ಲರಿಗೆ ಮೀಸಲಾತಿ ನೀಡುವ ವಿಚಾರ ಪ್ರಸ್ತಾಪಿಸಿ ವಿವರಣೆ ನೀಡಿದ್ದೇವೆ. ಅದೇ ರೀತಿ, ದೇವೇಗೌಡರು ಪ್ರಧಾನಿಯಾಗಿದ್ದಾಗ ತೆಗೆದುಕೊಂಡ ನೀರಾವರಿ ಯೋಜನೆ ಬಗ್ಗೆ ಚರ್ಚೆಯಾಗಿದೆ. ಕೊಬ್ಬರಿ ಕನಿಷ್ಠ ಬೆಂಬಲ ಬೆಲೆಯನ್ನು 15,000 ರೂ.ಗಳಿಗೆ ನಿಗದಿಪಡಿಸಲು ಮನವಿ ಮಾಡಿದ್ದೇವೆ ಎಂದರು.