ಜಿಲ್ಲೆ

ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲ: ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹೇಳಿಕೆ

ಮಂಡ್ಯ: ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿರುವ ಶಕ್ತಿ ಯೋಜನೆಯಿಂದ ಮಹಿಳಾ ಸಬಲೀಕರಣದ ಸಾಕಾರವಾಗುತ್ತಿದೆ. ಅಂತೆಯೇ ಈ ಯೋಜನೆ ಹಲವು ವರ್ಷಗಳ ನಂತರವು ನಿರಂತರವಾಗಿ ಜಾರಿಯಲ್ಲಿರಲಿದೆ. ಮಹಿಳೆಯರು ಇಲ್ಲಸಲ್ಲದ ಊಹಾಪೋಹಗಳಿಗೆ, ಪ್ರತಿಪಕ್ಷಗಳ ಮಾತಿಗೆ ಕಿವಿಕೊಡುವುದು ಬೇಡ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹೇಳಿದ್ದಾರೆ.

ಪ್ರತಿಪಕ್ಷಗಳು ಎಷ್ಟೇ ಟೀಕೆ ಮಾಡಿದರೂ ಕಾಂಗ್ರೆಸ್ ಸರ್ಕಾರವು ನುಡಿದಂತೆ ನಡೆದಿದೆ. ಪ್ರಣಾಳಿಕೆಯಲ್ಲಿ ನೀಡಿದಂತೆ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶವನ್ನು ಅಧಿಕಾರಕ್ಕೆ ಬಂದ ತಿಂಗಳೊಳಗೆ ಈಡೇರಿಸಿದೆ. ಮಹಿಳಾ ಸಬಲೀಕರಣದ ಬಗ್ಗೆ ಹಲವರು ಮಾತನಾಡುತ್ತಾರೆ. ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯ ಮೂಲಕ ಮಹಿಳಾ ಸಬಲೀಕರಣಕ್ಕೆ ನಿಜವಾದ ಅರ್ಥವನ್ನು ನೀಡಿದೆ. ಅಕ್ಷರಶಃ ಸ್ತ್ರೀ ಶಕ್ತಿಗೆ ಹೊಸ ಶಕ್ತಿ, ಚೈತನ್ಯವನ್ನು ತುಂಬಿದೆ. ಶಕ್ತಿ ಯೋಜನೆಯಿಂದ ಎಲ್ಲ ವರ್ಗದ ಮಹಿಳೆಯರಿಗೆ ಅನುಕೂಲವಾಗಿದೆ. ಯೋಜನೆ ಜಾರಿಯಾದಾಗಿನಿಂದ ರಾಜ್ಯದಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಶೇ.32ರಷ್ಟು ಹೆಚ್ಚಿದೆ. ಜೂ.11ರಂದು ಯೋಜನೆ ಜಾರಿಯಾಗಿದೆ. ಈ ಮೊದಲು ರಾಜ್ಯದ ನಾಲ್ಕು ನಿಗಮಗಳಲ್ಲಿ ಪ್ರತಿ ದಿನ 82.51 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈಗ 1.10 ಕೋಟಿ ಜನ ಸರಾಸರಿ ಪ್ರಯಾಣ ಮಾಡುತ್ತಿದ್ದಾರೆ. ಮಹಿಳೆಯರ ಪ್ರಯಾಣವೂ ಹೆಚ್ಚಳವಾಗಿದ್ದು, ಪುಣ್ಯ ಕ್ಷೇತ್ರಗಳು ಸೇರಿದಂತೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಕ್ಕಿದೆ ಎಂದಿದ್ದಾರೆ.

ಯೋಜನೆ ಐದಲ್ಲ ಹತ್ತು ವರ್ಷದ ಬಳಿಕವೂ ಮುಂದುವರಿಯುತ್ತದೆ. ಆತಂಕ ಬೇಡ, ಅನಾವಶ್ಯಕ ಟೀಕೆಗಳಿಗೆ ತಲೆಕೆಡಿಸಿಕೊಳ್ಳಬಾರದು. ಮಹಿಳೆಯರು ಬಸ್‌ಗಳಲ್ಲಿ ನುಗ್ಗಿ ತೆರಳುತ್ತಿರುವುದು ಕಂಡುಬಂದಿದೆ. ಆದರೆ, ಯಾರೂ ಗೊಂದಲಗಳಿಗೆ ಒಳಗಾಗಬೇಡಿ. ಎಲ್ಲ ಮಹಿಳೆಯರಿಗೆ ಯೋಜನೆಯ ಉಪಯೋಗ ಖಂಡಿತ ದೊರೆಯುತ್ತದೆ. ಹಾಗಾಗಿ ಆತಂಕವಿಲ್ಲದೆ, ಅಪಾಯ ಮಾಡಿಕೊಳ್ಳದೆ ಪ್ರಯಾಣ ಮಾಡಿ ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.