ಮೈಸೂರು: ದಸರಾ ಉದ್ಘಾಟಕರನ್ನು ಬದಲಾಯಿಸುವಂತೆ ಆಗ್ರಹಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕನ್ನಡ ಬಾವುಟ, ಭುವನೇಶ್ವರಿ, ಅರಿಶಿನ ಕುಂಕುಮದ ವಿರುದ್ಧ ಬಾನು ಮುಷ್ತಾಕ್ ನೀಡಿರುವ ಹೇಳಿಕೆ ಹಾಗೂ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ಖಂಡಿಸಿ ಹಳೇ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ಸೇನಾ ಪಡೆಯಿಂದ ಪ್ರತಿಭಟನೆ ನಡೆಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ದಸರಾ ಉದ್ಘಾಟನೆಗೆ ಭಾನು ಮುಷ್ತಾಕ್ ಸಮಂಜಸ ಆಯ್ಕೆ ಅಲ್ಲ. ಯಾರು ಏನೇ ಅಂದರೂ ದಸರಾ ಧಾರ್ಮಿಕ ಆಚರಣೆಯಾಗಿದೆ. ಮೈಸೂರು ಮಹಾರಾಜರಿಂದ ನೂರಾರು ವರ್ಷಗಳ ಹಿಂದೆ ಪ್ರಾರಂಭವಾದ ಧಾರ್ಮಿಕ ನಾಡಹಬ್ಬ ದಸರಾ. ಈ ಧಾರ್ಮಿಕ ಹಬ್ಬದ ಹಿಂದೆ ಹಿಂದು ಧರ್ಮದ ಸಂಸ್ಕೃತಿ, ಪರಂಪರೆ ಇದೆ. ದಸರಾದಲ್ಲಿ ಚಾಮುಂಡೇಶ್ವರಿ ದೇವಿಯ ಪೂಜೆ ನಡೆಯುತ್ತದೆ. ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಧಾರ್ಮಿಕತೆಯಲ್ಲಿ ನಂಬಿಕೆ ಇಲ್ಲದವರು ಮತ್ತು ದೇವರ, ಮೂರ್ತಿ ಪೂಜೆಯಲ್ಲಿ ನಂಬಿಕೆ ಇಲ್ಲದವರಿಂದ ದಸರಾ ಉದ್ಘಾಟಿಸುವುದು ಖಂಡನೀಯ ಎಂದು ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡವನ್ನು ಭುವನೇಶ್ವರಿ ಆಗಿ ಒಪ್ಪದ ಬಾನು ಮುಷ್ತಾಕ್ ಚಾಮುಂಡೇಶ್ವರಿಯನ್ನು ನಾಡದೇವತೆಯಾಗಿ ಒಪ್ಪಿ, ಪುಷ್ಪಾರ್ಚನೆ ಮಾಡಿ ಮಂಗಳಾರತಿ ತೆಗೆದುಕೊಳ್ಳುತ್ತಾರಾ? ಅರಿಶಿಣ ಕುಂಕುಮ, ಭುವನೇಶ್ವರಿಯ ಬಗ್ಗೆ ದ್ವೇಷದ ಭಾವನೆಯನ್ನು ಹೊಂದಿರುವ ಬಾನು ಮುಷ್ತಾಕ್ ದಸರಾ ಉದ್ಘಾಟಿಸಬಾರದು ಎಂದು ಆಗ್ರಹಿಸಿದರು.
ನಮ್ಮ ರಾಜ್ಯದಲ್ಲಿ ಅನೇಕ ಹಿರಿಯ ಘಟಾನುಘಟಿ ಸಾಧಕರುಗಳಿದ್ದಾರೆ. ಅದರಲ್ಲಿ ವಿಶೇಷವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ನಟ ಅನಂತ್‌ನಾಗ್, ಸಾಲುಮರದ ತಿಮ್ಮಕ್ಕ ಅಥವಾ ಬೂಕರ್ ಪ್ರಶಸ್ತಿ ಪುರಸ್ಕೃತರಾದ ದೀಪಾ ಬಸ್ತಿ ಅವರನ್ನು ದಸರಾ ಉದ್ಘಾಟಕರಾಗಿ ಆಹ್ವಾನಿಸಬಹುದಿತ್ತು ಎಂದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಮುಂಡಿಬೆಟ್ಟ ಹಿಂದುಗಳ ಆಸ್ತಿಯಲ್ಲ ಎಂದು ಹೇಳಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ನಾಡಿನ ಅಧಿದೇವತೆ ಚಾಮುಂಡೇಶ್ವರಿ ನೆಲೆಸಿರುವ ಚಾಮುಂಡಿಬೆಟ್ಟ ಹಿಂದುಗಳ ಆಸ್ತಿ ಅಲ್ಲ ಎಂಬ ಹೇಳಿಕೆ ಸರಿಯಲ್ಲ. ಮಸೀದಿಗಳು ಮುಸ್ಲಿಮರ ಆಸ್ತಿಯಲ್ಲ, ಚರ್ಚ್‌ಗಳು ಕ್ರೈಸ್ತರ ಆಸ್ತಿಯಲ್ಲ ಎಂದು ಹೇಳಿಕೆ ನೀಡುವ ಸಾಮರ್ಥ್ಯ ಡಿ.ಕೆ. ಶಿವಕುಮಾರ್ ಅವರಿಗೆ ಇದೆಯೇ? ಕೂಡಲೇ ಅವರು ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಪ್ರಭುಶಂಕರ್, ಗೋಲ್ಡನ್ ಸುರೇಶ, ಪ್ರಜೀಶ್, ಸಿಂಧುವಳ್ಳಿ ಶಿವಕುಮಾರ್, ಮಧುವನ ಚಂದ್ರು, ಬೋಗಾದಿ ಸಿದ್ದೇಗೌಡ, ವರಕೂಡು ಕೃಷ್ಣೇಗೌಡ, ನೇಹ, ಭಾಗ್ಯಮ್ಮ, ಹೊನ್ನೇಗೌಡ, ಶಿವಲಿಂಗಯ್ಯ, ಮಹದೇವಸ್ವಾಮಿ, ಹನುಮಂತಯ್ಯ, ನಂದಕುಮಾರ್, ಡಾ.ನರಸಿಂಹೇಗೌಡ, ಡಾ . ಶಾಂತರಾಜೇ ಅರಸ್ ಹಾಗೂ ಇತರರು ಪಾಲ್ಗೊಂಡಿದ್ದರು.