ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಸೇನಾಪಡೆ ವತಿಯಿಂದ ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಯಿತು.
ಧರ್ಮಸ್ಥಳ ನಮ್ಮ ರಾಜ್ಯದ ಪ್ರತಿಷ್ಠಿತ, ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯುತ್ತಾರೆ. ದೇವಸ್ಥಾನಕ್ಕೆ ಆಗಮಿಸುವ ಕೆಲವು ಭಕ್ತರು ಸ್ನಾನ ಮಾಡುವಾಗ ನೇತ್ರಾವತಿ ನದಿಯಲ್ಲಿ ಕಾಲು ಜಾರಿ ಬಿದ್ದು ಮೃತರಾಗಿರಬಹುದು, ಕೆಲವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು. ಇದನ್ನೇ ನೆಪವಾಗಿಟ್ಟುಕೊಂಡು ಕೆಲವು ಅನ್ಯಧರ್ಮೀಯರು, ದುಷ್ಟ ಶಕ್ತಿಗಳು ಶ್ರೀ ಕ್ಷೇತ್ರಕ್ಕೆ, ಧರ್ಮಾಧಿಕಾರಿಗಳಿಗೆ ಕೆಟ್ಟ ಹೆಸರು ತಂದು ನಮ್ಮ ಹಿಂದೂ ಧರ್ಮವನ್ನು, ಧಾರ್ಮಿಕ ಕ್ಷೇತ್ರವನ್ನು ಹಾಳು ಮಾಡಲು ವ್ಯವಸ್ಥಿತ ಸಂಚುಗಳನ್ನು ರೂಪಿಸುತ್ತಿದ್ದಾರೆ ಎಂದು ಸಂಘಟನೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.
ಧರ್ಮಸ್ಥಳದಲ್ಲಿದ್ದ ಅನಾಮಿಕ ವ್ಯಕ್ತಿಗೆ ಇಷ್ಟು ವರ್ಷಗಳಾದ ಮೇಲೆ ಪಾಪ ಪ್ರಜ್ಞೆ ಮೂಡಿ ಈಗ ಜಾಗ ತೋರಿಸಲು ಬಂದಿರುವುದು ಅತ್ಯಂತ ಅನುಮಾನಾಸ್ಪದವಾಗಿದೆ. ಈ ವ್ಯಕ್ತಿ ತೋರಿಸಿರುವ 16-17 ಜಾಗಗಳಲ್ಲಿ ಎಲ್ಲೂ ಸರಿಯಾಗಿ ಅಸ್ತಿಗಳು ಸಿಗುತ್ತಿಲ್ಲ. ದಿನಕ್ಕೊಂದು ಜಾಗ ತೋರಿಸಿ ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾನೆ. ಜತೆಗೆ ಈಗ ಇಬ್ಬರು ಬಂದು ಅವನು ಆಗ ಹೂತು ಹಾಕಿದ್ದನ್ನು ನೋಡಿದ್ದೇವೆ ಎನ್ನುತ್ತಿರುವುದು ಹಾಸ್ಯಾಸ್ಪದ. ಏಕೆಂದರೆ ಮುಖ ತೋರಿಸದ, ಮಾಸ್ಕ್ ಹಾಕಿರುವ ಈ ವ್ಯಕ್ತಿಯನ್ನು ಇವರು ಹೇಗೆ ಗುರುತು ಹಿಡಿದರು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ ಎಂದರು.
ರಾಜ್ಯ ಸರ್ಕಾರ ಯಾರೋ ಅನಾಮಿಕ ವ್ಯಕ್ತಿ ಹೇಳಿದ ಎಂದು ಹೇಳಿ ದಿನಕ್ಕೆ 3, 4 ಲಕ್ಷ ರೂ.ಸಾರ್ವಜನಿಕರ ತೆರಿಗೆ ಹಣವನ್ನು ಇದಕ್ಕೆ ಪೋಲು ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ. ಜತೆಗೆ ಸರ್ಕಾರ ಧರ್ಮಸ್ಥಳವನ್ನು ಮುಜರಾಯಿ ಇಲಾಖೆಗೆ ಒಳಪಡಿಸಿಕೊಳ್ಳಲು ಸಂಚು ರೂಪಿಸುತ್ತಿರುವ ಹಾಗಿದೆ. ಈ ಕೂಡಲೇ ಸರ್ಕಾರ ಅನಾಮಿಕ ವ್ಯಕ್ತಿಯನ್ನು ಎಸ್‌ಐಟಿ ವಶಕ್ಕೆ ಪಡೆದುಕೊಂಡು ಅವನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಸತ್ಯಾಂಶವನ್ನು ಬೆಳಕಿಗೆ ತರಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಗೋಲ್ಡನ್ ಸುರೇಶ್, ಪ್ರಭುಶಂಕರ್, ಸಿಂಧುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ, ಮಧುವನ ಚಂದ್ರು, ವರಕೂಡು ಕೃಷ್ಣೇಗೌಡ, ಶಿವಲಿಂಗಯ್ಯ, ನೇಹಾ, ಮಹದೇವಸ್ವಾಮಿ, ಪದ್ಮ, ಹೊನ್ನೇಗೌಡ, ಡಾ. ಶಾಂತರಾಜೇ ಅರಸ್, ನಾರಾಯಣ ಗೌಡ, ಹನುಮಂತಯ್ಯ, ರಾಧಾಕೃಷ್ಣ ಹಾಗೂ ಇತರರು ಪಾಲ್ಗೊಂಡಿದ್ದರು.