ಜಿಲ್ಲೆ

ಮೂವರು ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ: ಜನದನಿ ಸಾಂಸ್ಕೃತಿಕ ಟ್ರಸ್ಟ್‌ನಿಂದ ಆಯ್ಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಜನದನಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕರ್ನಾಟಕ ಸಂಘದ ಸಹಕಾರದೊಂದಿಗೆ ಕೊಡಮಾಡುವ ರಾಜ್ಯಮಟ್ಟದ ಇಂಡುವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿಗೆ ಬೆಂಗಳೂರಿನ ಗ್ಯಾಸ್ಟ್ರೋಎಂಟರಾಲಜಿ ಸೈನ್ಸ್ ಮತ್ತು ಅಂಗಾಗ ಕಸಿ ಸಂಸ್ಥೆಯ ಸ್ಥಾಪಕ ಡಾ.ಎನ್.ಎಸ್.ನಾಗೇಶ್, ದೇವಮ್ಮ ಇಂಡುವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿಗೆ ಮೈಸೂರು ವಿದ್ಯಾರಣ್ಯಪುರಂ ನಿವಾಸಿ ನೀಲಮ್ಮ ಹಾಗೂ ಎಚ್.ಹೊನ್ನಪ್ಪ ಕ್ರೀಡಾ ಪ್ರಶಸ್ತಿಗೆ ಮಂಡ್ಯದ ರಾಜ್ಯಮಟ್ಟದ ಕಬ್ಬಡಿ ಮಾಜಿ ಆಟಗಾರ ಎಚ್.ಕೆ.ಜಗದೀಶ್‌ಚಂದ್ರ ಆಯ್ಕೆಯಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಂದಗಾಲು, ಆ.31ರಂದು ಸಂಜೆ 5ಗಂಟೆಗೆ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಪುರಸ್ಕೃತರಿಗೆ ತಲಾ 25 ಸಾವಿರ ರೂ ನಗದಿನ ಜತೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಂತೆಯೇ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಬೇವಿನಹಳ್ಳಿ, ಇಂಡುವಾಳು ಹಾಗೂ ಹುಲ್ಕೆರೆ ಕೊಪ್ಪಲು ಗ್ರಾಮದ 4 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂ ನೀಡಲಾಗುವುದು ಎಂದರು.

ಆದಿಚುಂಚನಗರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ವಿಶ್ವಮಾನವ ಕ್ಷೇತ್ರದ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಆದಿಚುಂಚನಗಿರಿ ವಿವಿಯ ವಿಶ್ರಾಂತ ಕುಲಪತಿ ಡಾ.ಎಂ.ಶೇಖರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಾಜಿ ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದು, ಇಂಡುವಾಳು ಎಚ್.ಹೊನ್ನಯ್ಯ ಅವರ ಪುತ್ರ ಹಾಗೂ ರೈತ ಹೋರಾಟಗಾರ ಎಚ್.ಚಂದ್ರಶೇಖರ್ ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.

ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ, ನಿರ್ದೇಶಕ ಕೆ.ಜಯರಾಂ, ಡಾ.ಆದರ್ಶ ಇದ್ದರು.