ಮಂಡ್ಯ: ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್ ಸಹಯೋಗದಲ್ಲಿ ಮೈಸೂರು ಡಾ.ಗಂಗೂಬಾಯಿ ಹಾನಗಲ್ ಪ್ರದರ್ಶಕ ವಿಶ್ವವಿದ್ಯಾಲಯವು ಒಂದು ವರ್ಷದ ಮೂಡಲಪಾಯ ಯಕ್ಷಗಾನ ಕಲಿಕಾ ತರಗತಿಗಳನ್ನು ಪ್ರಾರಂಭಿಸಲು ಅಧಿಕೃತ ಅನುಮತಿ ನೀಡಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷರೂ ಆದ ಕಲಿಕಾ ಕೇಂದ್ರದ ಮುಖ್ಯ ಸಂಯೋಜಕ ಪ್ರೊ.ಬಿ.ಜಯಪ್ರಕಾಶಗೌಡ ತಿಳಿಸಿದರು.
ದಕ್ಷಿಣ ಕರ್ನಾಟಕ ಎಂಟಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮೂಡಲಪಾಯ ಯಕ್ಷಗಾನ ಪ್ರಕಾರ ಅಸ್ತಿತ್ವದಲ್ಲಿ ಇತ್ತು. ಗಂಡು ಕಲೆಯಾದ ಇದನ್ನು ಗ್ರಾಮೀಣ ಕಲಾವಿದರು ಹಬ್ಬ ಹರಿದಿನ, ಉತ್ಸವ, ಜಾತ್ರೆಗಳಲ್ಲಿ ಅಭಿನಯಿಸುತ್ತಿದ್ದರು. ಹಿರಿಯ ಕಲಾವಿದರು ತೆರೆಮರೆಗೆ ಸರಿದ ಹಿನ್ನೆಲೆಯಲ್ಲಿ ಅವಸಾನದ ಅಂಚಿಗೆ ತಲುಪಿತು. ಇದನ್ನು ಮನಗಂಡು ಈ ಕಲೆಯನ್ನು ಉಳಿಸಲು ಕರ್ನಾಟಕ ಸಂಘ ಮುಂದಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಕಲೆಯನ್ನು ಉಳಿಸಲು ಹಿರಿಯ ಐಆರ್‌ಎಸ್ ಅಧಿಕಾರಿ ಜಯರಾಂ ರಾಯಪುರ ಅವರು ಒತ್ತಾಸೆಯಾಗಿ ನಿಂತಿದ್ದಾರೆ. ಮಂಡ್ಯ ನಗರ ಹಾಗೂ ಸಮೀಪದ ಶಾಲೆಗಳಲ್ಲಿ ಈ ಕಲೆಯನ್ನು ಕಲಿಸುವ ಪ್ರಯತ್ನವನ್ನು ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಮಾಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಭಾಗವತರು, ಕಲಾವಿದರ ಸಮಾವೇಶ, ಕಾರ್ಯಾಗಾರ, ವಿಚಾರ ಸಂಕಿರಣ ನಡೆಸಲಾಗುತ್ತಿದೆ ಎಂದರು.
ಕೇಂದ್ರದ ನಿರ್ವಾಹಕ ಶಶಿಧರ ಭಾರಿಘಾಟ್ ಮಾತನಾಡಿ, ಫೆ.8ರಂದು ತರಗತಿಯನ್ನು ಪ್ರಾರಂಭಿಸಲಾಗುವುದು. 20 ರಿಂದ 40 ಜನರಿಗೆ ಅವಕಾಶವಿದ್ದು, ಶೈಕ್ಷಣಿಕ ತರಬೇತಿ ಅವಧಿ 10 ತಿಂಗಳಾಗಿರುತ್ತದೆ. ಕಲಿಕಾರ್ಥಿಗಳಿಗೆ ವಯೋಮಿತಿ ಕನಿಷ್ಟ 18 ರಿಂದ 40 ವರ್ಷವಾಗಿದ್ದು, 10ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು. ಪ್ರತಿ ಶನಿವಾರ ಮಧ್ಯಾಹ್ನ 2 ರಿಂದ ಭಾನುವಾರ ಮಧ್ಯಾಹ್ನ 2 ರವರೆಗೆ ತರಗತಿ ಇರುತ್ತದೆ. ತರಬೇತಿ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯವಿದೆ ಎಂದು ವಿವರಿಸಿದರು.
ವಾರ್ಷಿಕ ಶುಲ್ಕ 2 ಸಾವಿರ ರೂ., ಪಾರಂಪರಿಕ ಭಾಗವತರಿಂದ ಹಿರಿಯ ಕಲಾವಿದರಿಂದ ಪ್ರಾಯೋಗಿಕ ತರಬೇತಿ ನೀಡಲಾಗುವುದು. ಮುಖವರ್ಣಿಕೆ, ವೇಷಭೂಷಣ, ಕುಣಿತ ಮುಂತಾದ ತಾಂತ್ರಿಕ ವಿಷಯಗಳಲ್ಲಿ ತರಬೇತಿ ನೀಡಲಾಗುವುದು. ವಾರ್ಷಿಕ ಪರೀಕ್ಷೆ ನಂತರ ವಿಶ್ವವಿದ್ಯಾಲಯದಿಂದ ಪ್ರಮಾಣ ಪತ್ರ ನೀಡಲಾಗುವುದು ಎಂದು ಹೇಳಿದರು.
ಪ್ರಾಂಶುಪಾಲ ಪ್ರಮೋದ್ ಶಿಗ್ಗಾಂವ್ ಮಾತನಾಡಿ, 25 ರೂ ಪಾವತಿಸಿ ಅರ್ಜಿಯನ್ನು ಕರ್ನಾಟಕ ಸಂಘದ ಕಚೇರಿಯಿಂದ ನೇರ ಅಥವಾ ಅಂಚೆ ಮೂಲಕ ಪಡೆಯಬಹುದು. ಅಂತೆಯೇ ಜ.25ರೊಳಗೆ ಸಲ್ಲಿಸಬೇಕು. ಸಂದರ್ಶನದ ಮೂಲಕ ಕಲಿಕಾರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.