ಮಂಡ್ಯ: ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ 75ನೇ ವರ್ಷದ ಅಂಗವಾಗಿ ಜು.8ರಂದು ಬದುಕು-ಬರಹ: ವಿಚಾರ ಗೋಷ್ಠಿ ಹಾಗೂ ಆತ್ಮಕಥಾನಕ: ಹೋರಾಟದ ಹೆಜ್ಜೆಗಳು ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ ಎಂದು ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್ ಚಂದಗಾಲು ಹೇಳಿದರು.
ನಗರದ ರೈತ ಸಭಾಂಗಣದಲ್ಲಿ ಅಂದು ಮಧ್ಯಾಹ್ನ 2.30 ಸಾಹಿತಿ ಡಾ.ರಾಗೌ ಅವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಮೊದಲ ಗೋಷ್ಠಿಯಲ್ಲಿ ಜಯಪ್ರಕಾಶಗೌಡರ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆ ಕುರಿತು ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಎಸ್.ಮುದ್ದೇಗೌಡ ವಿಷಯ ಮಂಡನೆ ಮಾಡುವರು. ಎರಡನೇ ಗೋಷ್ಠಿಯಲ್ಲಿ ಜಯಪ್ರಕಾಶಗೌಡರ ವ್ಯಕ್ತಿಗತ ಸಂಬಂಧಗಳು ಕುರಿತು ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಕೆ.ಚಂದ್ರಶೇಖರ್ ಮತ್ತು ಮೂರನೇ ಗೋಷ್ಠಿಯಲ್ಲಿ ಜಯಪ್ರಕಾಶಗೌಡ-ರಂಗಭೂಮಿ ಕುರಿತು ನಿವೃತ್ತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರಗೌಡ ಹಾಗೂ ನಾಲ್ಕನೇ ಗೋಷ್ಠಿಯಲ್ಲಿ ಜಯಪ್ರಕಾಶಗೌಡ-ಕರ್ನಾಟಕ ಸಂಘ ಕುರಿತು ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಕೆ.ಹರೀಶ್‌ಕುಮಾರ್ ವಿಚಾರ ಮಂಡನೆ ಮಾಡುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ 5.30 ಗಂಟೆಗೆ ಮಾಜಿ ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವ ಪುಸ್ತಕ ಬಿಡುಗಡೆ ಮಾಡುವರು. ಪುಸ್ತಕ ಕುರಿತು ಸಾಹಿತಿ ಡಾ.ರಾಜಪ್ಪ ದಳವಾಯಿ ಮಾತನಾಡುವರು. ಎಂಎಲ್‌ಸಿ ಮಧು ಜಿ.ಮಾದೇಗೌಡ, ಮಾಜಿ ಎಂಎಲ್‌ಸಿಗಳಾದ ಬಿ.ರಾಮಕೃಷ್ಣ ಹಾಗೂ ಕೆ.ಟಿ.ಶ್ರೀಕಂಠೇಗೌಡ ಭಾಗವಹಿಸುವರು ಎಂದರು.
ಮುಖಂಡರಾದ ಎಚ್.ಬಿ.ನಾಗಪ್ಪ, ಎಚ್.ಡಿ.ಸೋಮಶೇಖರ್, ನಾಗರೇವಕ್ಕ ಹಾಜರಿದ್ದರು.