ಜಿಲ್ಲೆ

ಯುವಸಮೂಹದಲ್ಲಿ ಸಾಹಿತ್ಯದ ಅರಿವು:  ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ವಿವಿಧ ಯೋಜನೆ

ಪಂಕಜ ಕೆ.ಎಂ.

ಬೆಂಗಳೂರು: ವಿದ್ಯಾರ್ಥಿಗಳು ಹಾಗೂ ಯುವ ಸಮೂಹದಲ್ಲಿ ಭಾವೈಕ್ಯತೆಯ ಸೇತುವೆ ಕಟ್ಟುವ ಹಾಗೂ ಸೌಹಾರ್ದತೆಯನ್ನು ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ‘ಕನ್ನಡ ಭಾರತಿ ಪುಸ್ತಕ ಮಾಲೆ’ ಶೀರ್ಷಿಕೆಯಡಿ ರಾಮ ಮನೋಹರ ಲೋಹಿಯಾ ಸೇರಿ ಹಲವು ಮಹನೀಯರ ಪುಸ್ತಕಗಳನ್ನು ಪ್ರಕಟಿಸಲು ಯೋಜನೆ ರೂಪಿಸಿದೆ.

ಈ ಕುರಿತು ಕನ್ನಡ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದ್‌ರಾಜ್ ಮಾಹಿತಿ ನೀಡಿದರು. ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಅನೇಕ ಸಮಾಜ ಸುಧಾರಕರ ಬರಹಗಳಲ್ಲಿ, ಕಾವ್ಯಗಳಲ್ಲಿ, ವಚನಗಳಲ್ಲಿ, ತತ್ವಪದಕಾರರಲ್ಲಿ ಅಡಕವಾಗಿರುವ ಸೌಹಾರ್ದತೆಯ ನೆಲೆಗಳನ್ನು ಕ್ರೂಢೀಕರಿಸಿ 50 ಲಕ್ಷ ರೂ. ವೆಚ್ಚದಲ್ಲಿ 150 ಪುಸ್ತಕಗಳನ್ನು ಪ್ರಕಟಿಸಲಾಗುವುದು ಎಂದರು.

ಈ ಪುಸ್ತಕಗಳ ಜತೆಗೆ ವಿಚಾರ ಸಂಕಿರಣಗಳು, ಕಮ್ಮಟಗಳು, ಶಿಬಿರಗಳನ್ನು ಏರ್ಪಡಿಸುವ ಮೂಲಕ ಯುವಜನರಲ್ಲಿ ಸೌಹಾರ್ದತೆಯ ಭಾವನೆ ಬೆಳೆಸುವ ಪ್ರಯತ್ನ ಮಾಡಲಾಗುವುದು. ಈ ನಿಟ್ಟಿನಲ್ಲಿ ಅಕಾಡೆಮಿ ವತಿಯಿಂದ ಹಲವು ಯೋಜನೆಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಮಹಿಳಾ ಮುನ್ನಡೆ:

ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ನಾಡಿನ ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ 50 ಸಾಧಕ ಮಹಿಳೆಯರ ಕುರಿತು 50 ಪುಸ್ತಕಗಳನ್ನು ಪ್ರಕಟಿಸುವ ಯೋಜನೆ ಅಂತಿಮ ಹಂತದಲ್ಲಿದೆ. ಯುವಜನರಲ್ಲಿ ಮಾನವೀಯ ಮೌಲ್ಯಗಳನ್ನು ತಿಳಿಸುವ ನಿಟ್ಟಿನಲ್ಲಿ ಆಯ್ದ ಸಂಪನ್ಮೂಲ ವ್ಯಕ್ತಿಗಳಿಂದ ಕನ್ನಡ ಸಾಹಿತ್ಯದಲ್ಲಿ ಅಡಗಿರುವ ಮಾನವೀಯ ಮೌಲ್ಯಗಳ ಕುರಿತು ಪಠ್ಯ ರಚಿಸಿ ಕಾಲೇಜುಗಳಲ್ಲಿ ಉಪನ್ಯಾಸ ಕೊಡಿಸುವ ಅಭಿಯಾನ ರೂಪಿಸಲಾಗುತ್ತಿದೆ. ನಾಡಿನ ಬೆನ್ನೆಲುಬಾಗಿರುವ ಕೃಷಿಕರ ಯಶಸ್ಸನ್ನು ಪರಿಚಯಿಸಲು ‘ಬೇಸಾಯದ ಬದುಕು’ ಶೀರ್ಷಿಕೆಯಡಿ 50 ಸಾಧಕ ಕೃಷಿಕರ ಕುರಿತು ಪುಸ್ತಕ ಪ್ರಕಟಿಸಲಾಗುವುದು ಎಂದು ವಿವರಿಸಿದರು.

ಹಳಗನ್ನಡ ಸಾಹಿತ್ಯಗಳ ಮರು ಮುದ್ರಣ:

ಹಳಗನ್ನಡ ಸಾಹಿತ್ಯ ಓದುವುದರ ಬಗ್ಗೆ ಸಂಪೂರ್ಣ ನಿರಾಸಕ್ತಿ ಹೊಂದಿರುವ ಯುವಜನತೆಗೆ ಅದರಲ್ಲಿನ ಅತ್ಯಮೂಲ್ಯ ಅಂಶಗಳನ್ನು ತಿಳಿಯಲು ಅನುವಾಗುವಂತೆ ಹಳಗನ್ನಡ ಸಾಹಿತ್ಯ ಕೃತಿಗಳನ್ನು ಮರು ಮುದ್ರಣ ಮಾಡಲಿದ್ದು, ‘ಸಾಲು ದೀಪ’ ಈಗಾಗಲೇ 7ನೇ ಮುದ್ರಣ ಕಾಣುತ್ತಿದೆ. ಅದರ 2ನೇ ಭಾಗ ಹೊರತರುವ ಯೋಜನೆ ಹೊಂದಲಾಗಿದೆ. ಈ ಎಲ್ಲದರ ಜತೆಗೆ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ರೂಪಿಸಿದ್ದ ಯೋಜನೆಗಳನ್ನೂ ಮುಂದುವರಿಸಲಾಗುವುದು ಎಂದು ಮುಕುಂದ್ ರಾಜ್ ತಿಳಿಸಿದರು.

ಯುವ ಕವಿಗೋಷ್ಠಿ

ಯುವ ಕವಿಗಳನ್ನು ಪ್ರೋತ್ಸಾಹಿಸಿ, ಮಾರ್ಗದರ್ಶನ ನೀಡಲು ನಾಲ್ಕು ವಲಯಮಟ್ಟದ ಕವಿಗೋಷ್ಠಿಗಳನ್ನು ಸಂಘಟಿಸಲಾಗುವುದು. ‘ಸಂತೆಯಲ್ಲಿ ಸಾಹಿತ್ಯ’ ವಿನೂತನ ಕಾರ್ಯಕ್ರಮ ಸಹ ಆಯೋಜಿಸಲಾಗುತ್ತಿದ್ದು, ಸಂತೆ ಮತ್ತು ಜಾತ್ರೆಗಳಲ್ಲಿ ಒಂದೆಡೆ ವೇದಿಕೆ ನಿರ್ಮಿಸಿ ಸಂಜೆ 4ರ ನಂತರ ಪಂಪ, ಕುಮಾರವ್ಯಾಸ, ಕುವೆಂಪು, ಬೇಂದ್ರೆಯಂತಹ ಕನ್ನಡದ ಮಹತ್ವದ ಕವಿಗಳು ಮತ್ತು ಅವರ ಕಾವ್ಯಗಳನ್ನು ಪರಿಚಯಿಸುವ ಮೂಲಕ ಜನರಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಲಾಗುವುದು. ವಿದ್ಯಾರ್ಥಿಗಳಲ್ಲಿ ವೈಚಾರಿಕ ಜಾಗೃತಿ ಮೂಡಿಸಲು ಕುವೆಂಪು ಅವರ ನಾಲ್ಕು ವೈಚಾರಿಕ ಉಪನ್ಯಾಸಗಳನ್ನು ಪ್ರಕಟಿಸಿ ವಿದ್ಯಾರ್ಥಿಗಳಿಗೆ ಓದಲು ಪ್ರೇರೇಪಿಸುವುದು. ಹಿರಿಯ ಸಾಹಿತಿಗಳ ಸಂದರ್ಶನ ನಡೆಸಿ ಸಂಸ್ಕೃತಿ ಚಿಂತನಾ ದೃಶ್ಯಮಾಲಿಕೆಯಡಿ ಯೂಟ್ಯೂಬ್ ಚಾನಲ್‌ಗಳಲ್ಲಿ ಪ್ರಸಾರ ಮಾಡುವುದಾಗಿ ಮುಕುಂದ್ ರಾಜ್ ಹೇಳಿದರು.

ಕೋಟ್

ಕಾರಾಗೃಹ ವಾಸಿಗಳಲ್ಲಿ ಸಾಹಿತ್ಯದ ಆಸಕ್ತಿ ಮೂಡಿಸಲು ಕವಿತೆ, ವಚನಗಳು, ಸಾಹಿತ್ಯದಲ್ಲಿ ಅಡಗಿರುವ ಮಾನವೀಯ ಮೌಲ್ಯಗಳನ್ನು ತಿಳಿಸಲಾಗುತ್ತಿದೆ. ಮೈಸೂರಿನ ಕಾರಾಗೃಹ ವಾಸಿಗಳಿಗೆ ಕಳೆದ ತಿಂಗಳು ನಡೆಸಿದ ಸಾಹಿತ್ಯ ಕಮ್ಮಟದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ ಇತರೆ ಕಾರಾಗೃಹಗಳಲ್ಲೂ ಕಮ್ಮಟ ನಡೆಸಲು ಉದ್ದೇಶಿಸಲಾಗಿದೆ.

ಎಲ್.ಎನ್. ಮುಕುಂದ್‌ರಾಜ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ