ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ 
ಜಿಲ್ಲೆ

ಮಾದಕ ವಸ್ತುಗಳಿಗೆ ಕರ್ನಾಟಕ ಸುರಕ್ಷಿತ ಸ್ಥಳ: ಆರಗ ಜ್ಞಾನೇಂದ್ರ

ಶಿವಮೊಗ್ಗ: ಗಾಂಜಾ, ಅಫೀಮು ಸೇರಿ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟಕ್ಕೆ ಕರ್ನಾಟಕ ಸುರಕ್ಷಿತ ಸ್ಥಳವಾಗಿದ್ದು ಅಪರಾಧ ಹೆಚ್ಚಳಕ್ಕೆ ಮಾದಕ ವಸ್ತುಗಳು ಕಾರಣವಾಗಿವೆ ಎಂದು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು.

ಕಾಂಗ್ರೆಸ್‌ನ ತುಷ್ಟೀಕರಣದ ರಾಜಕಾರಣದಿಂದ ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗಿ ಉಳಿದಿಲ್ಲ. ಬದಲಾಗಿ ಅಶಾಂತಿಯ ತೋಟವಾಗಿದೆ. ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವವರಿಗೆ ಇಲ್ಲಿ ಭಯವಿಲ್ಲ. ಈ ನಡುವೆ ನಕ್ಸಲರು ಕೂಡ ಸಕ್ರಿಯವಾಗಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ದಿಕ್ಕಾಪಾಲಾಗಿದೆ. ಜನರ ಪ್ರಾಣ, ನೆಮ್ಮದಿಗೆ ಬೆಲೆಯೇ ಇಲ್ಲ. ವಿಶೇಷವಾಗಿ ಪೊಲೀಸರಿಗೂ ರಕ್ಷಣೆ ಇಲ್ಲದಂತಾಗಿದೆ. ಪೊಲೀಸರ ಬಗ್ಗೆ ಅಪರಾಧಿಗಳಿಗೂ ಭಯವಿಲ್ಲ. ಚನ್ನಗಿರಿ ಪ್ರಕರಣದಲ್ಲಿ ಅಪರಾಧಿಯನ್ನು ಠಾಣೆಗೆ ಕರೆತಂದಿದ್ದಾರೆ. ಲಾಕಪ್‌ಡೆತ್ ಕೂಡ ಆಗಿದೆ. ಅದ್ಯಾವುದನ್ನೂ ನಾನು ನಿರಾಕರಿಸುವುದಿಲ್ಲ. ಆದರೆ ಎರಡು ಸಾವಿರ ಜನ ಸೇರಿ ಠಾಣೆಗೆ ಮುತ್ತಿಗೆ ಹಾಕಿ ಸರ್ಕಾರಿ ವಾಹನಗಳನ್ನು ಜಖಂಗೊಳಿಸಿ ಗದ್ದಲ ಎಬ್ಬಿಸುವಷ್ಟು ಧೈರ್ಯ ಎಲ್ಲಿಂದ ಬಂತು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಜತೆಗೆ ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಎತ್ತ ಸಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಬೆಂಗಳೂರಿನ ಕೆ.ಜಿ.ಹಳ್ಳಿ, ಹುಬ್ಬಳ್ಳಿ ಪ್ರಕರಣಗಳಲ್ಲಿ ಪೊಲೀಸ್ ಠಾಣೆಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಾರೆ. ಆದರೆ ಕಾಂಗ್ರೆಸ್ ಅವರನ್ನು ಅಮಾಯಕರೆಂದು ಹೇಳಿದೆ. ಅಲ್ಲದೆ ಅಮಾಯಕರಾಗಿರುವ ಅವರನ್ನು ಬಿಡಿ ಎಂದು ಪತ್ರ ಕೊಟ್ಟಿದ್ದಾರೆ. ಇದು ಕಾಂಗ್ರೆಸ್‌ನ ತುಷ್ಟೀಕರಣದ ನೀತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ, ಶಿವಮೊಗ್ಗ ಗ್ರಾಮಾಂತರ ಮಾಜಿ ಅಧ್ಯಕ್ಷ ರತ್ನಾಕರ್ ಶಣೈ, ಮುಖಂಡರಾದ ಕೆ.ವಿ.ಅಣ್ಣಪ್ಪ, ಭವಾನಿರಾವ್ ಮೋರೆ ಸುದ್ದಿಗೋಷ್ಠಿಯಲ್ಲಿದ್ದರು.