ಮಂಡ್ಯ: ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಯೆಂದು ಹೆಸರಾಗಿರುವ ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರೆಸುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೆಲ ರಾಜಕೀಯ ಪ್ರೇರಿತ ಪಟ್ಟಭದ್ರ ಹಿತಾಸಕ್ತಿಗಳು, ಭಷ್ಟ್ರ ಅಧಿಕಾರಿಗಳು ಹಾಗೂ ಮಧ್ಯವರ್ತಿ ದಲ್ಲಾಳಿಗಳು ಪಿತೂರಿ ಮತ್ತು ಬೆಂಬಲದಿಂದ ಎಸಿ ಶ್ರೀನಿವಾಸ್ ಅವರನ್ನು ಲಂಚ ಪ್ರಕರಣದಲ್ಲಿ ಸಿಲುಕಿಸಿ ವರ್ಗಾವಣೆ ಹಾಗೂ ಅಮಾನತುಗೊಳಿಸಲು ದೂರು ಸಲ್ಲಿಸಲಾಗಿದೆ. ಆದರೆ ಮೇಲ್ನೋಟಕ್ಕೆ ಎಸಿ ಶ್ರೀನಿವಾಸ್ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ನಾಲ್ಕೈದು ತಿಂಗಳ ಅವಧಿಯಲ್ಲಿ 3500ಕ್ಕೂ ಹೆಚ್ಚು ಪ್ರಕರಣವನ್ನು ಇತ್ಯರ್ಥಪಡಿಸಿದ್ದಾರೆ. ಜನಸಾಮಾನ್ಯರ ಜತೆ ಸಂಯಮದಿಂದ ನಡೆದುಕೊಂಡು ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಕಂದಾಯ ಇಲಾಖೆಯಲ್ಲಿ ಸರಾಗವಾಗಿ ಹಾಗೂ ಮಧ್ಯವರ್ತಿಗಳ ಬೆಂಬಲವಿಲ್ಲದೆ ಆಗುತ್ತಿರುವ ಕೆಲಸದ ಬೆಳವಣಿಗೆ ಸಹಿಸದೇ ಎಸಿ ವಿರುದ್ಧ ದೂರು ಸಲ್ಲಿಸಿದ್ದಾರೆ. ಅವರ ವಿರುದ್ಧದ ಆರೋಪಗಳೆಲ್ಲ ಸತ್ಯಕ್ಕೆ ದೂರವಾಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಅಧಿಕಾರಿಯನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಉಸ್ತುವಾರಿ ರಮೇಶ್‌ಗೌಡ, ನಾಗರಾಜು, ಮಲ್ಲೇಶ, ಶಶಿಧರ್ ಇತರರಿದ್ದರು.