ಜಿಲ್ಲೆ

ಅ.10ರಂದು ಸದಸ್ಯತ್ವ ನೋಂದಣಿ ಅಭಿಯಾನ: ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ಡಿ.ಜಿ.ನಾಗರಾಜು ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ರಾಜ್ಯಾದ್ಯಂತ ನಡೆಸುತ್ತಿರುವ ಸದಸ್ಯತ್ವ ನೊಂದಣಿ ಅಭಿಯಾನ ಅ.10ರಂದು ಜಿಲ್ಲೆಯನ್ನು ಪ್ರವೇಶಿಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಡಿ.ಜಿ.ನಾಗರಾಜು ತಿಳಿಸಿದರು.

ಎದ್ದೇಳು ಕನ್ನಡಿಗ-ಕೆಆರ್‌ಎಸ್ ಪಕ್ಷ ಸೇರು ಬಾ ಘೋಷಣೆಯೊಂದಿಗೆ ಅ.6ರಂದು ಆರಂಭಗೊಂಡಿರುವ ಸದಸ್ಯತ್ವ ನೊಂದಣಿ ಅಭಿಯಾನ ಅ.16ವರೆಗೆ ನಡೆಯಲಿದೆ. 10ರಂದು ಬೆಳಗ್ಗೆ ಮಂಡ್ಯ ನಗರಕ್ಕೆ ಅಭಿಯಾನ ತಂಡವು ಬರಲಿದೆ. ನಗರದಲ್ಲೆಡೆ ಸಂಚರಿಸಿ ಮದ್ದೂರು, ಕೆ.ಎಂ.ದೊಡ್ಡಿ, ಮಳವಳ್ಳಿ ಪಟ್ಟಣದ ಮೂಲಕ ನೆರೆಯ ಚಾಮರಾಜನಗರ ಜಿಲ್ಲೆ ಪ್ರವೇಶಿಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ರಘು ಜಾಣಗೆರೆ, ರಾಜ್ಯ ಉಪಾಧ್ಯಕ್ಷರಾದ ಎಸ್.ಮಂಜುನಾಥ್ ಮತ್ತು ಕೆ.ಎಸ್.ಸೋಮಸುಂದರ್ ನೇತೃತ್ವದಲ್ಲಿ ಮೂರು ತಂಡ ರಾಜ್ಯಾದ್ಯಂತ ಸದಸ್ಯತ್ವ ನೋಂದಣಿ ಮಾಡುತ್ತಿವೆ. ಅಭಿಯಾನ ಅವಧಿ ಮುಗಿದ ನಂತರ ಚರ್ಚಿಸಿ ನವೆಂಬರ್ ತಿಂಗಳಿನಲ್ಲಿ ರಾಜ್ಯಮಟ್ಟದ ಸಮಾವೇಶ ನಡೆಸಲಾಗುವುದು. ಕೆಆರ್‌ಎಸ್ ಪಕ್ಷವು ರಾಜ್ಯದಲ್ಲಿ ಜನರ ಪ್ರೀತಿ, ವಿಶ್ವಾಸ ಗಳಿಸುತ್ತಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಸದಸ್ಯತ್ವ ಪಡೆಯಲು ಮುಂದಾಗುತ್ತಿದ್ದಾರೆ. ಹೀಗಾಗಿ ಪಕ್ಷವನ್ನು ಇನ್ನಷ್ಟು ಬಲಪಡಿಸಿ ಜನರ ಬಳಿಗೆ ಕೊಂಡೊಯ್ಯಲು ಸದಸ್ಯತ್ವ ಅಭಿಯಾನ ಮಾಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಕಾರ್ಯದರ್ಶಿ ಎಚ್.ಇ.ಯೋಗೀಶ್, ರೈತ ಘಟಕ ಅಧ್ಯಕ್ಷ ಜಿ.ಕೆ.ರಾಜು, ಪ್ರಧಾನ ಕಾರ್ಯದರ್ಶಿ ಹರೀಶ್ ಕಂಪಲಾಪುರ, ಯುವ ಘಟಕದ ಪ್ರಧಾನ ಕಾರ್ಯದರ್ಶಿ ದೀಪಿಕಾ, ಮಂಡ್ಯ ತಾಲೂಕು ಉಪಾಧ್ಯಕ್ಷ ಎಸ್.ಜಗದೀಶ್, ಮಳವಳ್ಳಿ ತಾಲೂಕು ಅಧ್ಯಕ್ಷ ಮಾದೇಗೌಡ ಹಾಜರಿದ್ದರು.