ಜಿಲ್ಲೆ

ಶಾಂತಿ ಕಾಪಾಡಲು ಕ್ರಮ ತೆಗೆದುಕೊಳ್ಳಲಿ: ಕೆಆರ್‌ಎಸ್ ರಾಜ್ಯ ಕಾರ್ಯಾಧ್ಯಕ್ಷ ರಘು ಆಗ್ರಹ

ಕೆ.ಎನ್.ರಾಘವೇಂದ್ರ

ಮಂಡ್ಯ: ರಾಜ್ಯದಲ್ಲಿ ಕೋಮು ಸಂಘರ್ಷ ಹೆಚ್ಚಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಕಾರಣ. ಇದರಿಂದಾಗಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಶಾಂತಿ ಕಾಪಾಡಲು ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ರಘು ಜಾಣಗೆರೆ ಆಗ್ರಹಿಸಿದರು.

ರಾಜಕಾರಣಿಗಳು ಕೇವಲ ಮತದ ಓಲೈಕೆಯಿಂದ ಸಮುದಾಯಗಳ ನಡುವೆ ಎತ್ತಿಕಟ್ಟಿ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದರಿಂದ ಅಪರಾಧ ಚಟುವಟಿಕೆಗಳು ಹೆಚ್ಚುವ ಮೂಲಕ ರಾಜ್ಯದಲ್ಲಿ ಅಶಾಂತಿ ವಾತಾವರಣ ಉಂಟಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಗಂಭೀರ ಮತ್ತು ಪ್ರಮುಖ ಅಪರಾಧಿ ಚಟುವಟಿಕೆ, ಕೋಮು ಗಲಭೆಗಳು ರಾಜ್ಯದ ಹಲವು ಕಡೆಗಳಲ್ಲಿ ಪದೇಪದೆ ಜರುಗುತ್ತಿವೆ. ಇದರಿಂದ ಕೋಮು ಸೌಹಾರ್ದತೆಗೆ ದಕ್ಕೆ ಉಂಟಾಗಿ ಸಮಾಜಕ್ಕೆ ಮಾರಕವಾಗಿ ಪರಿಣಮಿಸಿದೆ. ಮದ್ದೂರಿನಲ್ಲಿ ನಡೆದ ಕೋಮು ಗಲಭೆಯನ್ನು ರಾಜಕೀಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡು ಅಮಾಯಕರನ್ನು ಬಲಿಪಶು ಮಾಡಲಾಗುತ್ತಿದೆ ಎಂದು ವಿಷಾದಿಸಿದರು.

ಜಿಲ್ಲಾಧ್ಯಕ್ಷ ಡಿ.ಜಿ.ನಾಗರಾಜು, ಉಪಾಧ್ಯಕ್ಷ ಹೆಬ್ಬಕವಾಡಿ ಮಲ್ಲೇಶ್, ಸಹಕಾರ್ಯದರ್ಶಿ ಸಿ.ಜೀವನ್, ನಾಗರಾಜು, ಪ್ರಮೋದ್, ಹರೀಶ್ ಕಂಪ್ಲಾಪುರ ಇದ್ದರು.