ಜಿಲ್ಲೆ

ಕೆಆರ್‌ಎಸ್ ಎರಡನೇ ಪಟ್ಟಿಯಲ್ಲಿ ಮೂವರಿಗೆ ಅವಕಾಶ

ರಾಯಚೂರು: ಜಿಲ್ಲೆಯ ಮೂರು ವಿಧಾನಸಭೆ ಕ್ಷೇತ್ರಗಳಿಗೆ ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಲಾಗಿದೆ. ಈ ಮುಂಚೆ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪಟ್ಟಿ ಪ್ರಕಟಿಸಲಾಗಿತ್ತು. ದೇವದುರ್ಗ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಪಕ್ಷದ ಜಿಲ್ಲಾಧ್ಯಕ್ಷ ನಿರುಪಾದಿ ಗೋಮರ್ಸಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಪಕ್ಷದ ರಾಜ್ಯಾಧ್ಯಕ್ಷ ಮೊದಲ ಪಟ್ಟಿಯಲ್ಲಿ 47 ಹಾಗೂ ಎರಡನೇ ಪಟ್ಟಿಯಲ್ಲಿ 119 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದು, ಶೀಘ್ರ ಮೂರನೇ ಪಟ್ಟಿ ಪ್ರಕಟಿಸಲಾಗುವುದು. ರಾಯಚೂರು ನಗರ ಕ್ಷೇತ್ರದಿಂದ ರಾಮಣ್ಣ ಆರ್‌ಎಚ್‌ಜೆ, ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಐ.ಕುಮಾರನಾಯಕ, ಮಾನ್ವಿ ಕ್ಷೇತ್ರದಿಂದ ಬಸವಪ್ರಭು ಮೇದಾರ್ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿದ್ದಾರೆ. ದೇವದುರ್ಗ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿಯನ್ನು ಗುರುತಿಸಲಾಗುತ್ತಿದೆ ಎಂದರು.

ಪಕ್ಷದ ನವಸೂತ್ರಗಳ ಪ್ರಣಾಳಿಕೆಯೊಂದಿಗೆ ಮತಯಾಚನೆ ನಡೆಸಲಾಗುತ್ತಿದ್ದು, ಶಿಕ್ಷಣ, ಕೃಷಿ, ಪ್ರಾದೇಶಿಕತೆ, ಅಸಂಘಟಿತ ಕಾರ್ಮಿಕರ ಅಭಿವೃದ್ಧಿ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಭರವಸೆ ನೀಡಲಾಗುತ್ತಿದೆ ಎಂದು ತಿಳಿಸಿದರು. ರಾಮಣ್ಣ ಆರ್‌ಎಚ್‌ಜೆ, ಐ.ಕುಮಾರನಾಯಕ, ಬಸವಪ್ರಭು ಮೇದಾರ ಉಪಸ್ಥಿತರಿದ್ದರು.