ಮಂಗಳೂರು: ವಿದೇಶಿ ರಫ್ತಿನಲ್ಲಿ ಕರ್ನಾಟಕ ದೇಶಕ್ಕೆ ಮೊದಲ ಸ್ಥಾನದಲ್ಲಿದೆ. ಯಂತ್ರಗಳ ರಫ್ತಿನಲ್ಲಿ ನಾಲ್ಕನೇ ಸ್ಥಾನ ಇದೆ ಎಂದು ವಿಟಿಪಿಸಿ ಮಂಗಳೂರು ವಿಭಾಗದ ಉಪ ನಿರ್ದೇಶಕ ಮಂಜುನಾಥ ಹೆಗಡೆ ಹೇಳಿದರು.
ಕರ್ನಾಟಕ ಸರ್ಕಾರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ(ವಿಟಿಪಿಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕಾ ಸಂಘ(ಕಾಸಿಯಾ) ಸಹಯೋಗದಲ್ಲಿ ಎಂಎಸ್‌ಎಂಇಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು(ರ‌್ಯಾಂಪ್) ಯೋಜನೆಯಡಿಯಲ್ಲಿ ಲೀನ್ ಯೋಜನೆ ಮತ್ತು ಝಡ್‌ಇಡಿ ಹಾಗೂ ರಫ್ತು ಕುರಿತು ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳೆದ ವರ್ಷ ಜನವರಿಯಿಂದ ಅಕ್ಟೋಬರ್ ವರೆಗೆ ದ.ಕ.ದಿಂದ 32.08 ಕೋಟಿ ರು.ಗಳ ವಿವಿಧ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಯುಎಇ, ನೆದರ್‌ಲ್ಯಾಂಡ್, ಮಲೇಶಿಯಾ, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಆಸ್ಟ್ರೇಲಿಯಾ ದೇಶಗಳಿಗೆ ಉತ್ಪನ್ನಗಳು ರಫ್ತು ಆಗುತ್ತಿವೆ. ಮಂಗಳೂರಿನಿಂದ ವಿದೇಶಗಳಿಗೆ ಮೀನು, ಗೋಡಂಬಿ, ಸೆಂಟೆಡ್ ಕ್ಯಾಂಡಲ್, ಚಾಕಲೇಟ್, ಎಂಜಿನಿಯರಿಂಗ್ ಮಿಷನರಿ, ಕಾರ್ಡಲೈಟ್ ಉತ್ಪನ್ನಗಳು, ಅಡಕೆ ಹಾಳೆಗಳು ರಫ್ತುಗೊಳ್ಳುತ್ತಿವೆ ಎಂದರು.
ಕಾರ್ಯಾಗಾರ ಉದ್ಘಾಟಿಸಿದ ಎಂಎಸ್‌ಎಂಇ ಸೌಲಭ್ಯ ಕಚೇರಿಯ ಜಂಟಿ ನಿರ್ದೇಶಕ ಡಾ.ಕೆ.ಸಾಕ್ರೇಟಿಸ್ ಮಾತನಾಡಿ, ದೇಶದ ಜಿಡಿಪಿ ಮತ್ತು ರಫ್ತಿಗೆ ಎಂಎಸ್‌ಎಂಇಗಳ ಕೊಡುಗೆ ಮಹತ್ತರವಾದ್ದು. ಇಷ್ಟಾದರೂ ಇವು ಸಮಸ್ಯೆಗಳಿಂದ ಮುಕ್ತಗೊಂಡಿಲ್ಲ. ಕನಿಷ್ಠ ಬಂಡವಾಳ ತೊಡಗಿಸಿ ಗರಿಷ್ಠ ಉತ್ಪಾದನೆ ಮಾಡುತ್ತಿದ್ದಾರೆ. ಇಷ್ಟಾದರೂ ಇವರಿಗೆ ಮಾರುಕಟ್ಟೆ ಸಮಸ್ಯೆ ಹಾಗೂ ವೃತ್ತಿ ನೈಪುಣ್ಯದ ಕೊರತೆ ಕಾಡುತ್ತಿದೆ. ಸರ್ಕಾರಗಳ ನಿಯಮಗಳೂ ಪರಿಣಾಮವನ್ನು ಉಂಟು ಮಾಡುತ್ತಿವೆ ಎಂದರು.
ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಕೆನರಾ ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಸಂಜಯ ಕುಮಾರ್ ಸಿಂಗ್, ಮಂಗಳೂರಿನ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ವಿಶಾಲ್ ಎಲ್.ಸಾಲಿಯಾನ್, ಜಿಲ್ಲಾ ಸಣ್ಣ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್, ಮಂಗಳೂರು ಕೆನರಾ ಕೈಗಾರಿಕಾ ಸಂಘದ ಅಧ್ಯಕ್ಷ ಅರುಣ್ ಪಡಿಯಾರ್, ಕಾಸಿಯಾ ಉಪಾಧ್ಯಕ್ಷ ಗಣೇಶ್ ರಾವ್, ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್ ಎಸ್.ಸಾಗರ್, ಜಂಟಿ ಕಾರ್ಯದರ್ಶಿ ಜೆ.ಎಸ್.ಬಾಬು, ಗ್ರಾಮೀಣ ಜಂಟಿ ಕಾರ್ಯದರ್ಶಿ ಸತೀಶ್, ಖಜಾಂಚಿ ಮಂಜುನಾಥ್ ಇದ್ದರು.
---------------
ಯೋಜನೆ ಅನುಷ್ಠಾನಕ್ಕೆ ಬ್ಯಾಂಕ್ ನೆರವು
ಮಂಗಳೂರು ಕೆನರಾ ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಸಂಜಯ ಕುಮಾರ್ ಸಿಂಗ್ ಮಾತನಾಡಿ, ದೇಶದ ಶೇ.45 ಜಿಡಿಪಿ(ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಟ್) ನಲ್ಲಿ ಎಂಎಸ್‌ಎಂಇ ಕೊಡುಗೆ ಇದೆ. ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಬ್ಯಾಂಕ್‌ಗಳು ನೆರವು ನೀಡುತ್ತಿವೆ. ಎಂಎಸ್‌ಎಂಇಗಳಿಗೆ 4 ಸಾವಿರ ಕೋಟಿ ರು.ಗಳ ನೆರವನ್ನು ಬ್ಯಾಂಕ್‌ಗಳು ನೀಡಿವೆ. ಕೆನರಾ ಜಿಎಸ್‌ಟಿ ಸ್ಕೀಮ್‌ನಡಿ ಶೇ.25ರ ವರೆಗೆ ಜಿಎಸ್‌ಟಿ ಪಾವತಿದಾರರಿಗೂ ಹಣಕಾಸು ನೆರವು ಒದಗಿಸಲಾಗುವುದು. ವೈದ್ಯರಿಗೆ ಹಾಗೂ ಉದ್ದಿಮೆದಾರರಿಗೆ ಇದು ಜನಪ್ರಿಯ ಯೋಜನೆಯಾಗಿದೆ ಎಂದರು.
---------------
ಬಂದರು ಪ್ರದೇಶ ಮಂಗಳೂರಿನಿಂದ ವಿದೇಶಗಳಿಗೆ ವಾರ್ಷಿಕ 47 ಸಾವಿರ ಕೋಟಿ ರು. ಮೌಲ್ಯದ ವಿವಿಧ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಇದರಲ್ಲಿ 44 ಸಾವಿರ ಕೋಟಿ ರು.ಗಳಷ್ಟು ಉತ್ಪನ್ನಗಳು ಎಂಆರ್‌ಪಿಎಲ್ ಪಾಲಿಗೆ ಸೇರಿದೆ. ಇನ್ನಷ್ಟು ಉತ್ಪನ್ನಗಳನ್ನು ರಫ್ತು ಮಾಡುವ ನಿಟ್ಟಿನಲ್ಲಿ ಉದ್ದಿಮೆದಾರರಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಹೊಸ ರಫ್ತುದಾರರಿಗೆ ತಿಳಿವಳಿಕೆ ನೀಡುವ ಉದ್ದೇಶದಿಂದ ಮಾರ್ಚ್ 24ರಿಂದ 29ರ ವರೆಗೆ ರಾಜ್ಯದಲ್ಲೇ ಎರಡೇ ದೊಡ್ಡ ರಫ್ತು ನಿರ್ವಹಣಾ ಅಭಿವೃದ್ಧಿ ಕಾರ್ಯಾಗಾರವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.
-ಗೋಕುಲ್‌ದಾಸ್ ನಾಯಕ್
ಮಂಗಳೂರಿನ ಜಿಲ್ಲಾ ಸಣ್ಣ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ