ಬೆಂಗಳೂರು:ಉತ್ಪನ್ನಗಳ ಮೇಲೆ ಕನ್ನಡದಲ್ಲಿ ಹೆಸರು, ವಿವರ ಮುದ್ರಿಸುವುದು, ಉತ್ಪನ್ನಗಳ ಏಜೆನ್ಸಿಗಳನ್ನು ಕನ್ನಡಿಗರಿಗೆ ನೀಡುವುದು, ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮಾತ್ರ ಉದ್ಯೋಗ ಕಲ್ಪಿಸುವುದೂ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ "ಮಹಾ ಸಂರ್ಷ' ಯಾತ್ರೆಗೆ ಶನಿವಾರ ಚಾಲನೆ ನೀಡಲಾಯಿತು.
ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಸಾವಿರಾರು ಕನ್ನಡಪರ ಹೋರಾಟಗಾರರು ಶಾಲು ಧರಿಸಿ ಮೂರು ಹಕ್ಕೊತ್ತಾಯಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಕಾಪೋರ್ರೇಟ್ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು ಈಡೇರಿಸಬೇಕೆಂದು ಘೋಷಣೆ ಕೂಗಿದರು. ಇಲ್ಲವಾದರೆ, ಹಂತ ಹಂತವಾಗಿ ತೀವ್ರ ಸ್ವರೂಪದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಟಿ.ಎ.ನಾರಾಯಣಗೌಡ ಮಾತನಾಡಿ, ಕೆಲ ಬ್ಯಾಂಕ್ಗಳಲ್ಲಿ ಕನ್ನಡದಲ್ಲಿ ಬರೆದ ಚೆಕ್ಗಳನ್ನು ತಿರಸ್ಕರಿಸುತ್ತಿವೆ. ಬಹುತೇಕ ಬ್ಯಾಂಕ್ಗಳಲ್ಲಿ ಕನ್ನಡೇತರ ಸಿಬ್ಬಂದಿ ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಕನ್ನಡದ ಬಗ್ಗೆ ತಿರಸ್ಕಾರ ಮನೋಭಾವ ಹೊಂದಿದ್ದಾರೆ. ಹಿಂದಿ ಬಾರದ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಹಾಗಾಗಿ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ಗಳು, ಹಣಕಾಸು ಸಂಸ್ಥೆಗಳು ಹಿಂದಿ ಬಳಸಬಾರದು. ಕನ್ನಡ. ಇಂಗ್ಲಿಷ್ ಭಾಷೆಯಲ್ಲೇ ಮಾತ್ರ ವ್ಯವರಿಸುವಂತಾಗಬೇಕು. 3ನೇ ಭಾಷೆ ನಮಗೆ ಅಗತ್ಯ ಇಲ್ಲ ಎಂದರು. ಇದಕ್ಕೂ ಮುನ್ನ ಕನ್ನಡದ ಹಾಡುಗಳನ್ನು ಪ್ರಸಾರ ಮಾಡುವ ಮೂಲಕ ಹೋರಾಟಗಾರರನ್ನು ಹುರಿದುಂಬಿಸಲಾಯಿತು. ವೇದಿಕೆಯ ಜಿಲ್ಲಾ, ತಾಲೂಕು ಪದಾಧಿಕಾರಿಗಳು ಸೇರಿ ಸಾವಿರಾರು ಕನ್ನಡಪರ ಹೋರಾಟಗಾರರು ಉಪಸ್ಥಿತರಿದ್ದರು.
ಕನ್ನಡಿಗರನ್ನು ನೇಮಿಸಿ:ಬ್ಯಾಂಕ್ಗಳ ಸಿಬ್ಬಂದಿ ನಮ್ಮ ರಾಜ್ಯದವರೇ ಆಗಿರಬೇಕು. ಕನ್ನಡ ಗೊತ್ತಿಲ್ಲದ ಸಿಬ್ಬಂದಿ ಬೇರೆ ರಾಜ್ಯಕ್ಕೆ ವರ್ಗಾಯಿಸಬೇಕು. ಡಾ. ಸರೋಜಿನಿ ಮಹಿಷಿ ಪರಿಷತ ವರದಿ ಅನ್ವಯ ರಾಷ್ಟ್ರೀಯ, ಖಾಸಗಿ, ಗ್ರಾಮೀಣ, ಸಹಕಾರಿ ಬ್ಯಾಂಕ್ಗಳು, ಫೈನಾನ್ಸ್ಗಳು, ಚಿನ್ನದ ಅಡಮಾನ ಮತ್ತು ಜೀವವಿಮಾ ಸೇರಿ ಇತರೆ ಬಗೆಯ ಸಂಸ್ಥೆಗಳಲ್ಲಿ ಗ್ರೂಪ್ "ಸಿ' ಮತ್ತು "ಡಿ' ದರ್ಜೆಯ ಹುದ್ದೆಗಳಲ್ಲಿ ಕನ್ನಡಿಗರನ್ನೇ ನೇಮಿಸಬೇಕು ಎಂದು ನಾರಾಯಣಗೌಡ ಆಗ್ರಹಿಸಿದ್ದಾರೆ. ಅಂಗಡಿಗಳ ನಾಮಲಕಗಳಲ್ಲಿ ಶೇ.60 ಕನ್ನಡದಲ್ಲಿ ಇರಬೇಕು ಎಂದು ನೀತಿ ಮಾದರಿಯನ್ನು ರಾಜ್ಯದಲ್ಲಿ ಮಾರಾಟವಾಗುವ ಎಲ್ಲ ಉತ್ಪನ್ನಗಳಿಗೂ ಜಾರಿಗೆ ತರಬೇಕು. ಇದನ್ನು ಜಾರಿಗೊಳಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ನಿಯಮ ಉಲ್ಲಂಘಿಸುವ ಉತ್ಪನ್ನಗಳ ಮಾರಾಟವನ್ನು ರಾಜ್ಯದಲ್ಲಿ ನಿಷೇಧಿಸುವ ಕಾನೂನು ರೂಪಿಸಬೇಕು ಎಂದು ಸಲಹೆ ನೀಡಿದರು.