ಕಾರಟಗಿಯ ಶ್ರೀಸಿದ್ದೇಶ್ವರ ರಂಗಮಂದಿರದಲ್ಲಿ ಗಜಾನನ ನವಭಾರತ ಯುವ ಜಾಗೃತ ಸೇನೆ ಪ್ರತಿಷ್ಠಾಪಿಸಿದ ಚಂದ್ರಯಾನ-3ರ ಗಣೇಶ ಜನಮನ ಸೆಳೆದಿದೆ. 
ಜಿಲ್ಲೆ

ಜನಮನ ಸೆಳೆದ ಚಂದ್ರಯಾನ ಗಣೇಶ

ಕಾರಟಗಿ: ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದ ಶ್ರೀ ಸಿದ್ದೇಶ್ವರ ರಂಗ ಮಂದಿರದಲ್ಲಿ ಗಜಾನನ ನವಭಾರತ ಯುವ ಜಾಗೃತ ಸೇನೆ 11ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಪ್ರತಿಷ್ಠಾಪಿಸಿದ ಚಂದ್ರಯಾನ-3ರ ಗಣಪ ಜನಮನ ಸೆಳೆದಿದೆ.

ಗಜಾನನ ನವಭಾರತ ಯುವ ಜಾಗೃತ ಸೇನೆಯಿಂದ ಪ್ರತಿಷ್ಠಾಪನೆ

ಸೆ.19ರಂದು ಪ್ರತಿಷ್ಠಾಪಿಸಿದ ಬೃಹತ್ ಗಣೇಶ ಮೂರ್ತಿ ಪಕ್ಕದಲ್ಲಿ ಸಂಘದ ಯುವಕರು ಚಂದ್ರಯಾನ-3 ಹೋಲಿಕೆಯ ಮತ್ತೊಂದು ಪುಟ್ಟ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಇಸ್ರೋದ ಚಂದ್ರಯಾನ-3 ಯಶಸ್ವಿ ಹಿನ್ನಲೆಯಲ್ಲಿ ಬೃಹತ್ ಚಂದ್ರ ಮತ್ತು ಚಂದ್ರನ ಮೇಲೆ ಇಳಿದ ಪ್ರಗ್ಯಾನ್, ರೋವರ್ ಹಾಗೂ ರಾಕೆಟ್ ಕೆಳಗೆ ಗಣೇಶನ ಪುಟ್ಟ ಮೂರ್ತಿ ಎಲ್ಲರ ಗಮನ ಸೆಳೆದಿದೆ. ದರ್ಶನಕ್ಕೆ ತೆರಳುವ ಸಾರ್ವಜನಿಕರು, ಮಕ್ಕಳು, ಮಹಿಳೆಯರು ಫೋಟೋ, ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದಾರೆ. ಪ್ರೀಸಂ ಕನ್ಸಲ್ಟನ್ ವಿಶ್ವಜೀತೆಂದ್ರ ಬಡಿಗೇರ್ ನೇತೃತ್ವದ ಕಲಾವಿದರ ತಂಡ ಥರ್ಮಕೋಲ್, ಹತ್ತಿ, ಬಿಳಿ ಎಲ್‌ಇಡಿ ಬಲ್ಪ್ ಹಾಗೂ ಪ್ಲೈವುಡ್‌ನಿಂದ ಗಣೇಶನನ್ನು ನಿರ್ಮಿಸಿದೆ.

ಆಯುರ್ವೇದ ಪಿತಾಮಹ ಚರಕ, ವಿಜ್ಞಾನಿಗಳಾದ ಸುಶ್ರುತ, ಭಾಸ್ಕರ, ಗಣಿತ ಮತ್ತು ಖಗೋಳ ಶಾಸ್ತ್ರಜ್ಞರಾದ ಆರ್ಯಭಟ, ಬ್ರಹ್ಮಗುಪ್ತ, ಗಣಿತ ಶಾಸ್ತ್ರಜ್ಞ ಹಾಗೂ ಜ್ಯೋತಿಷಿ ವರಹಮಿಹೀರ ಕುರಿತು ಚಂದ್ರಯಾನ-3 ಗಣೇಶ ಮೂರ್ತಿಯ ಕೆಳಗೆ ಫೋಟೋ ಸಹಿತ ಮಾಹಿತಿ ಒದಗಿಸಲಾಗಿದೆ.
ಗಜಾನನ ನವಭಾರತ ಯುವ ಜಾಗೃತ ಸೇನೆ ಗುರುವಾರ ಏರ್ಪಡಿಸಿದ್ದ ಅನ್ನಸಂತರ್ಪಣೆ ಕಾರ್ಯುಕ್ರಮದಲ್ಲಿ ಪಟ್ಟಣದ ಸಾವಿರಾರು ಜನರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು. ಸೇನೆಯ ಗೌರವಾಧ್ಯಕ್ಷ ಉದಯ್ ಈಡಿಗೇರ್, ಉಪಾಧ್ಯಕ್ಷ ಅಭಿ ಅಂಗಡಿ, ಪದಾಧಿಕಾರಿಗಳಾದ ಶಿವು ಕನಕರೆಡ್ಡಿ, ವೆಂಕಟೇಶ ಬೂದಿ, ರಂಗನಾಥ ಬೂದಿ, ಕಿರಣ್ ಅಳವಂಡಿ, ಮಹಾಬಳೇಶ, ಬಸಬವರಾಜ ಗದ್ದಿ, ಅಭಿ ಸುಂಕದ್, ಧರ್ಮಸಿಂಗ್, ವಿನೋದ್ ಇತರರಿದ್ದರು.