ಕನಕಗಿರಿಯ ಕರ್ನಾಟಕ ಪಬ್ಲಿಕ್ ಶಾಲೆಯ 5ನೇ ತರಗತಿ ಮಕ್ಕಳು ಧಾನ್ಯ ಹಾಗೂ ತರಕಾರಿ ಮೂಲಕ ರಾಷ್ಟ್ರಧ್ವಜ ಅರಳಿಸಿರುವುದು. 
ಜಿಲ್ಲೆ

ತರಕಾರಿ, ಧಾನ್ಯಗಳಲ್ಲಿ ರಾಷ್ಟ್ರಧ್ವಜ ಅರಳಿಸಿದ ಕೆಪಿಎಸ್ ವಿದ್ಯಾರ್ಥಿಗಳು

ಕನಕಗಿರಿ: ಅಮೃತ ಸ್ವಾತಂತ್ರ್ಯ ಮಹೋತ್ಸವ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ದೇಶಾದ್ಯಂತ ಆರಂಭಗೊಂಡಿರುವ ಹರ್ ಘರ್ ತಿರಂಗಾ ಈ ವರ್ಷವೂ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಕೆಪಿಎಸ್ ಮಕ್ಕಳು ತರಕಾರಿ ಹಾಗೂ ಧಾನ್ಯದಲ್ಲಿ ಬಾವುಟ ಬಿಡಿಸಿ ರಾಷ್ಟ್ರಪೇಮ ಮೆರೆದಿದ್ದಾರೆ.

ಕರ್ನಾಟಕ ಪಬ್ಲಿಕ್ ಶಾಲೆಯ 5ನೇ ತರಗತಿ ಮಕ್ಕಳಿಗೆ ಹಮ್ಮಿಕೊಂಡಿದ್ದ ರಾಷ್ಟ್ರಧ್ವಜ ಬಿಡಿಸುವ ಸ್ಪರ್ಧೆಯಲ್ಲಿ 25 ಮಕ್ಕಳಿಂದ ಇಂತಹ ಒಂದು ನೂತನ ಪ್ರಯೋಗ ನಡೆದಿದೆ. ಊಟದ ತಟ್ಟೆ ಬಳಸಿ ವಿದ್ಯಾರ್ಥಿಗಳು ರಾಷ್ಟ್ರಧ್ವಜ ಬಣ್ಣಗಳಾದ ಕೇಸರಿ, ಬಿಳಿ, ಹಸಿರು ಸಹಿತ ಅಶೋಕ ಚಕ್ರಕ್ಕೆ ತರಕಾರಿ ಹಾಗೂ ಧಾನ್ಯಗಳಾದ ಮೂಲಂಗಿ, ಕೊತ್ತಂಬರಿ, ಪಾಲಕ್, ಕ್ಯಾರೆಟ್, ಅಕ್ಕಿ, ತೊಗರಿಬೇಳೆ ಬಳಸಿ ರಾಷ್ಟ್ರಧ್ವಜ ರಚಿಸಿದರು. ಒಬ್ಬರಿಗಿಂತ ಒಬ್ಬರು ಮಿಗಿಲು ಎನ್ನುವಂತೆ ಆಕರ್ಷಕವಾಗಿ ಬಾವುಟವನ್ನು ಬಿಡಿಸಿದ್ದಾರೆ. ಮಕ್ಕಳ ಈ ವಿಭಿನ್ನ ಕಾರ್ಯಕ್ಕೆ ಶಾಲೆಯ ಮುಖ್ಯಶಿಕ್ಷಕ ಹಾಗೂ ಶಿಕ್ಷಕರು ಸಾಥ್ ನೀಡಿದ್ದಾರೆ.

ಸ್ಪರ್ಧೆಯಲ್ಲಿ ಸಾಜಿಯಾ ಪರ್ವಿನ್ (ಪ್ರಥಮ), ಜ್ವಯಾ ತಾರಿನ್ (ದ್ವಿತೀಯ) ಹಾಗೂ ಶಾರದಾ ಮತ್ತು ಶ್ರೇಯಾ (ತೃತೀಯ) ಬಹುಮಾನ ಪಡೆದುಕೊಂಡರು. ಸ್ವಾತಂತ್ರ್ಯೋತ್ಸವದದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಶಿಕ್ಷಕರು ತಿಳಿಸಿದರು.

ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲಕುಮಾರ, ಶಿಕ್ಷಕರಾದ ವಿಶ್ವನಾಥ, ಎಸ್.ಬಿ.ಪಾಟೀಲ್, ಸೈಫುಲ್ಲಾ, ಕನಕಾಚಲ, ವಿದ್ಯಾವತಿ, ತಿಪ್ಪಮ್ಮ, ವಿಜಯೇಂದ್ರ, ಲಕ್ಷ್ಮೀಬಾಯಿ, ಮಲ್ಲಿಕಾರ್ಜುನ, ಮಮ್ಮದಬೀ, ಆಫ್ರೀನ್, ಪ್ರಿಯಾ, ಬಸವರಾಜ ಇತರರಿದ್ದರು.