ಜಿಲ್ಲೆ

ಭತ್ತದ ಕಟಾವು ಯಂತ್ರ ಮಾಲಕರಿಂದ ರೈತರ ಸುಲಿಗೆ ಆರೋಪ

ಉಡುಪಿ: ಜಿಲ್ಲೆಯಾದ್ಯಂತ ಭತ್ತದ ಬೆಳೆ ಕಟಾವು ಆರಂಭವಾಗಿದ್ದು ಭತ್ತದ ಕಟಾವು ಯಂತ್ರದ ಮಾಲೀಕರು ಹಾಗೂ ದಲ್ಲಾಳಿಗಳು ಪ್ರತಿ ಗಂಟೆಗೆ 2400 ರೂ. ದರ ನಿಗದಿ ಮಾಡಿ ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಂಚಲನ ಸಮಿತಿ ನಿಯೋಗ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಭತ್ತ ಬೆಳೆದ ರೈತರು ಜಿಲ್ಲೆಗಳಿಗೆ ಬರುವ ಕಟಾವು ಯಂತ್ರಗಳ ವಸೂಲಿಯಿಂದ ಸಂಕಷ್ಟಕ್ಕೀಡಾಗಿದ್ದಾರೆ ಜಿಲ್ಲಾಧಿಕಾರಿಗಳು ನಿಗದಿತ ದರ ವಿಧಿಸಿ ಪ್ರಕಟಣೆ ಹೊರಡಿಸಬೇಕು. ರೈತರು ಹಾಗೂ ಕಟಾವು ಯಂತ್ರದ ಮಾಲಕರು ಹಾಗೂ ಕೃಷಿ ಇಲಾಖೆ ಜೊತೆ ಜಂಟಿ ಸಭೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಲಾಯಿತು. ಬೆಂಬಲ ಬೆಲೆ ಘೋಷಿಸಿ ಭತ್ತದ ಖರೀದಿ ಕೇಂದ್ರಗಳನ್ನು ಅಕ್ಟೋಬರ್​ ತಿಂಗಳಲ್ಲೇ ಆರಂಭಿಸಬೇಕು. ಇದರಿಂದ ಬಹುತೇಕ ರೈತರಿಗೆ ಅನುಕೂಲವಾಗುತ್ತದೆ ಎಂದು ಮನವಿ ನೀಡಿದರು.

ನಿಯೋಗದಲ್ಲಿ ಜಿಲ್ಲಾ ಸಂಚಾಲಕ ಚಂದ್ರಶೇಖರ ವಿ, ರೈತರಾದ ಅನಿಲ್​ ಬಾರ್ಕೂರು, ಗಣೇಶ್​ ಪೂಜಾರಿ, ಜಲಂಧರ್​, ಕಾರ್ಮಿಕ ಮುಖಂಡರಾದ ಸುರೇಶ್​ ಕಲ್ಲಾಗರ, ಶಶಿಧರ ಗೊಲ್ಲ ಕವಿರಾಜ್​ ಎಸ್​., ಮೋಹನ್​ ಉಪಸ್ಥಿತರಿದ್ದರು.