ಜಿಲ್ಲೆ

ಭತ್ತ ಕಟಾವು ಯಂತ್ರದ ಹೆಸರಿನಲ್ಲಿ ರೈತರ ಲೂಟಿ ನಿಲ್ಲಿಸಲು ಆಗ್ರಹ

ಉಡುಪಿ: ಜಿಲ್ಲೆಯಾದ್ಯಂತ ಭತ್ತ ಕಟಾವು ಯಂತ್ರಗಳು ಗಂಟೆಗೆ 2400 ರೂ. ಮಿಕ್ಕಿ ದರ ವಸೂಲಿ ಮಾಡುತ್ತಿದ್ದು, ರೈತರ ಲೂಟಿ ತಡೆಯಲು ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶ ಮಾಡಿ ಗಂಟೆಗೆ ವೈಜ್ಞಾನಿಕ ಗರಿಷ್ಠ ದರ ನಿಗದಿ ಪಡಿಸಬೇಕೆಂದು ರೈತ ಮುಖಂಡ ಚಂದ್ರಶೇಖರ್​ ವಿ. ಆಗ್ರಹಿಸಿದರು.

ಗುರುವಾರ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಲನ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಕರ್ನಾಟಕ ಪ್ರಾಂತ ರೈತ ಸಂಘ ಕಳೆದ ಒಂದು ತಿಂಗಳ ಹಿಂದೆ ಸಮಸ್ಯೆ ಬಗೆಹರಿಸಲು ಮನವಿ ನೀಡಿದರೂ ರ್ನಿಲಕ್ಷ್ಯ ವಹಿಸಲಾಗಿದೆ. ರೈತರಿಂದ ಹೆಚ್ಚುವರಿ ದರ ವಸೂಲಿ ಮಾಡುವ ಯಂತ್ರದ ಮಾಲೀಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಕೃಷಿ ಕೇಂದ್ರಗಳ ಮೂಲಕ ಭತ್ತ ಕಟಾವು ಯಂತ್ರ ಒದಗಿಸಬೇಕು. ಭತ್ತ ಖರೀದಿ ಕೇಂದ್ರವನ್ನು ತಕ್ಷಣವೇ ಎಲ್ಲ ತಾಲೂಕು ಕೇಂದ್ರಗಳಲ್ಲಿ ತೆರೆಯಬೇಕು. ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಅನಿಲ್​ ಬಾರ್ಕೂರು, ಗಣೇಶ್​ ಬಾರ್ಕೂರು, ಕಾರ್ಮಿಕ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಸುರೇಶ್​ ಕಲ್ಲಾಗರ, ಕೆ.ಶಂಕರ್​, ಚಿಕ್ಕ ಮೊಗವೀರ, ಶಶಿಧರ್​ ಗೊಲ್ಲ , ಬಲ್ಕಿಸ್​, ಸುಭಾಷ್​ ನಾಯಕ್​ ಉಪಸ್ಥಿತರಿದ್ದರು. ಪ್ರತಿಭಟನೆಯ ನಂತರ ಅಪರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.