ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡಿ ಕಾರ್ಮಿಕರಿಗೆ ಉದ್ಯೋಗ, ರೈತರಿಗೆ ಪರಿಹಾರ ನೀಡಲು ಆಗ್ರಹಿಸಿ ಪ್ರಾಂತ ಕೂಲಿಕಾರರ ಸಂಘದಿಂದ ಕನಕಗಿರಯಲ್ಲಿ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಮನವಿ ಸಲ್ಲಿಸಲಾಯಿತು. ಕಾರ್ಯದರ್ಶಿ ಈರಣ್ಣ ಬಂಡಿ, ಸದಸ್ಯರಾದ ಭೀಮಣ್ಣ, ರುದ್ರಪ್ಪ, ಗಿರಿಯಪ್ಪ, ಗಂಗಯ್ಯಸ್ವಾಮಿ, ಪರಸಪ್ಪ ಹುಗ್ಗಿ ಇತರರಿದ್ದರು. 
ಜಿಲ್ಲೆ

ಸರ್ಕಾರ ಬರಗಾಲ ಘೋಷಣೆ ಮಾಡಲಿ; ಕೃಷಿ ಕೂಲಿಕಾರರ ಸಂಘ ಒತ್ತಾಯ

Gangavati - Mohan Kumar H R

ಕನಕಗಿರಿ: ಮಳೆ ಅಭಾವದಿಂದ ಬರಗಾಲದ ಲಕ್ಷಣಗಳು ಕಾಣಿಸುತ್ತಿದ್ದು, ಸರ್ಕಾರ ಬರಗಾಲ ಘೋಷಣೆ ಮಾಡಿ ಕಾರ್ಮಿಕರಿಗೆ ಕೆಲಸ ಹಾಗೂ ರೈತರಿಗೆ ಬೆಳೆ ನಷ್ಟ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಗೋಡಿನಾಳ ಘಟಕದಿಂದ ಶುಕ್ರವಾರ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಭೀಮಣ್ಣ ತಳವಾರ ಮಾತನಾಡಿ, ಮಳೆಯನ್ನೇ ಆಶ್ರಯಿಸಿ ಬೇಸಾಯ ಮಾಡುವ ಕನಕಗಿರಿ ತಾಲೂಕು ಸೇರಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅಪೂರ್ಣ ಮಳೆಗೆ ಶೇ.50 ಬಿತ್ತನೆ ಮಾಡಲಾಗಿದೆ. ಆದರೆ, ಈ ಬಾರಿ ಮುಂಗಾರು ಮಳೆ ಸಂಪೂರ್ಣ ವೈಫಲ್ಯವಾಗಿದ್ದು, ಬಿತ್ತಿದ ಬೆಳೆಗಳು ಒಣಗಲಾರಂಭಿಸಿವೆ. ಇದರಿಂದ ಕಾರ್ಮಿಕರಿಗೆ ಕೆಲಸವಿಲ್ಲವಾಗಿದ್ದು, ರೈತರಾದಿಯಾಗಿ ಕಾರ್ಮಿಕರು ನಗರ ಪ್ರದೇಶಗಳತ್ತ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಮಳೆಯಿಲ್ಲದೆ ಜಾನುವಾರುಗಳಿಗೆ ನೀರು, ಮೇವಿನ ಅಭಾವ ಉಂಟಾಗಿದೆ. ಈ ನಿಟ್ಟಿನಲ್ಲಿ ಸಣ್ಣ, ಮಧ್ಯಮ ವರ್ಗದ ರೈತರು ಚಿಂತೆಗೀಡಾಗಿದ್ದು, ಮುಂಬರುವ ದಿನಗಳಲ್ಲಿ ಬಿಸಿಲಿನ ತಾಪಕ್ಕೆ ರೋಗ ರುಜಿನಗಳು ತಗುಲುವ ಆತಂಕ ರೈತರನ್ನು ಕಾಡತೊಡಗಿದೆ. ರಾಜ್ಯ ಸರ್ಕಾರ ಬರಪೀಡಿತ ತಾಲೂಕೆಂದು ಘೋಷಿಸಬೇಕೆಂದು ಮನವಿ ಮಾಡಿದರು.

ಕಾರ್ಯದರ್ಶಿ ಈರಣ್ಣ ಬಂಡಿ, ಸದಸ್ಯರಾದ ಭೀಮಣ್ಣ, ರುದ್ರಪ್ಪ, ಗಿರಿಯಪ್ಪ, ಗಂಗಯ್ಯಸ್ವಾಮಿ, ಪರಸಪ್ಪ ಹುಗ್ಗಿ, ಬಸಣ್ಣ ವಕ್ರ, ದುರ್ಗಸಿಂಗ್ ರಜಪೂತ್, ಹನುಮಂತ ತಳವಾರ, ಪರಸಪ್ಪ ರಜಪೂತ, ಹನುಮಂತ ದಿವಾನ್, ಮರಿಯಮ್ಮ ದಿವಾನ್, ಕರಿಯಪ್ಪ ತಳವಾರ, ಶಂಕ್ರಯ್ಯಸ್ವಾಮಿ ಇತರರಿದ್ದರು.