ಜಿಲ್ಲೆ

ಬೆಂಬಲ ಬೆಲೆ ಹಕ್ಕು ಜಾರಿಗೊಳಿಸಿ

ಕನಕಗಿರಿ: ಜನ ವಿರೋಧಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ವಿರೋಧಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ ಇಲ್ಲಿನ ವಾಲ್ಮೀಕಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಶರಣಪ್ಪಗೆ ಮನವಿ ಸಲ್ಲಿಸಿತು.

ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಮರಕುಂಬಿ ಮಾತನಾಡಿ, ಕಾರ್ಖಾನೆಗಳಿಗಾಗಿ ಬಲವಂತದ ಭೂ ಸ್ವಾಧೀನ ಕೈಬಿಡಬೇಕು. ಕಾರ್ಪೋರೇಟ್‌ಪರ ನಿಲುವು ನಿಲ್ಲಿಸಬೇಕು. ಜನ ವಿರೋಧಿ ರಾಜ್ಯ ಕೃಷಿ, ಕಂದಾಯ ಹಾಗೂ ಭೂ ಸ್ವಾಧೀನ ಕಾಯ್ದೆಗಳ ರದ್ದುಗೊಳಿಸಬೇಕು. ರೈತರ ಸಾಲಮನ್ನಾ ಮಾಡಬೇಕು. ಕನಿಷ್ಠ ಬೆಂಬಲ ಬೆಲೆ ಹಕ್ಕು ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಸಂಘದ ತಾಲೂಕಾಧ್ಯಕ್ಷ ರಮೇಶ ಬಡಿಗೇರ ಮಾತನಾಡಿ, 1996 ರಿಂದ ಇಲ್ಲಿಯವರೆಗೆ ಭೂಸ್ವಾಧೀನ ಕಾಯ್ದೆಯಡಿ ಜಮೀನಿನಲ್ಲಿ ಕೈಗಾರಿಕೆಗಳು ಸ್ಥಾಪನೆ ಮಾಡಲಾಗಿದೆ. ಭೂಮಿಯನ್ನು ಮತ್ತಷ್ಟು ದುರ್ಬಳಕೆ ಮಾಡಿಕೊಳ್ಳಲು ಹಾಗೂ ರೈತರ ಭೂಮಿಯನ್ನು ಕಿತ್ತುಕೊಳ್ಳಲು ಅವಕಾಶ ನೀಡುವ ಜಾಗತಿಕ ಬಂಡವಾಳ ಹೂಡಿಕೆ ಒಪ್ಪಂದ ಮಾಡಿಕೊಳ್ಳಬಾರದು. ಕೂಡಲೇ ಬಂಡವಾಳ ಸಭೆ ರದ್ದು ಪಡಿಸಬೇಕು. ನ್ಯಾಯಾಲಯದ ಸೂಕ್ತ ಆದೇಶವಿಲ್ಲದೇ, ಅರಣ್ಯ ಇಲಾಖೆ ಮತ್ತು ರೈತರ ನಡುವಿನ ಸಿವಿಲ್ ವಿವಾದದಲ್ಲಿ ಅರಣ್ಯ ಇಲಾಖೆ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ರಾಜ್ಯದ ಪೊಲೀಸರು, ಮೀಸಲು ಪಡೆ ಬಳಸಿಕೊಳ್ಳುವುದು ನಿರ್ಬಂಧಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆ ತಾಲೂಕು ಕಾರ್ಯದರ್ಶಿಹುಸೇನಪ್ಪ ಕೆ., ಪ್ರಮುಖರಾದ ಬಾಳಪ್ಪ ಹುಲಿಹೈದರ, ಅಮೀನಾಬೀ, ಬಸ್ಸಮ್ಮ, ಯಮನಪ್ಪ, ಮಲ್ಲಪ್ಪ ಮ್ಯಾಗಡೆ, ಪರಶುರಾಮ ಇತರರಿದ್ದರು.