ದೇವದುರ್ಗ: ರಾಜ್ಯಾದ್ಯಂತ ಬರ ಆವರಿಸಿದ್ದರಿಂದ ಕೃಷಿ ಕೂಲಿಕಾರರಿಗೆ ಅಗತ್ಯ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಪಟ್ಟಣದ ಮಿನಿವಿಧಾನಸೌಧ ಮುಂದೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಮಂಗಳವಾರ ಪ್ರತಿಭಟನೆ ನಡೆಸಿತು.
ತೀವ್ರ ಮಳೆ ಕೊರತೆಯಿಂದ ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದು ರೈತರು, ಕೂಲಿಕಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕರ್ನಾಟಕದಾದ್ಯಂತ ಬರವಿದ್ದರೂ ಸರ್ಕಾರ 236ರಲ್ಲಿ 195 ತಾಲೂಕುಗಳನ್ನು ಮಾತ್ರ ಬರಪೀಡಿತವೆಂದು ಘೋಷಣೆ ಮಾಡಿ 41 ತಾಲೂಕಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ಕೃಷಿಕೂಲಿಕಾರರ ಕುಟುಂಬಗಳಿಗೆ ಬರ ಪರಿಹಾರವಾಗಿ 6ತಿಂಗಳವರೆಗೆ ಮಾಸಿಕ 10ಸಾವಿರ ರೂ. ನೀಡಬೇಕು. ಇವರು ಜೀವನೋಪಾಯಕ್ಕಾಗಿ ಮಾಡಿರುವ ಮೈಕ್ರೋ ಫೈನಾನ್ಸ್, ಗುಂಪುಸಾಲ, ಸೊಸೈಟಿ ಸಾಲ ಮನ್ನಾಮಾಡಬೇಕು. ಗರೀಬ್ ಕಲ್ಯಾಣ ಯೋಜನೆಯಡಿ ಈ ಕುಟುಂಬಗಳಿಗೆ ಹೆಚ್ಚುವರಿ ಪಡಿತರ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ 200ದಿನಗಳ ಕೆಲಸ ನೀಡಿ 600ರೂ. ಕೂಲಿನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಲಿಂಗಣ್ಣ ನಾಯಕ ಮಾಶಿ, ಸಿಐಟಿಯು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ, ಮುಖಂಡರಾದ ಹನುಮಂತ್ರಾಯ ಗಲಗ, ಕೃಷ್ಣರಾಜ ದೊರೆ, ಸುರೇಶಗೌಡ, ಅಯ್ಯಪ್ಪ, ಆನಂದ, ಅಮರೇಶ, ಶಿವರಾಜ, ಹನುಮಂತ ಬುಂಕಲದೊಡ್ಡಿ, ದೇವಪ್ಪ ಯರಗುಡ್ಡ, ಬಸವರಾಜ, ಮಲ್ಲಿಕಾರ್ಜುನ, ಹನುಮಂತ ಶಾವಂತಗಲ್, ರವಿ, ಹನುಮಂತರಾಯ ಆಕಳಕುಂಪಿ, ಮಲ್ಲಿಕಾರ್ಜುನ ಇತರರಿದ್ದರು.