ಜಿಲ್ಲೆ

ಭತ್ತ ಖರೀದಿ ಕೇಂದ್ರ ತೆರೆಯಲು ಆಗ್ರಹ: ನಗರದಲ್ಲಿ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ

ಮಂಡ್ಯ: ಭತ್ತ ಖರೀದಿ ಕೇಂದ್ರ ತೆರೆಯಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ರೈತ ವಿರೋಧಿ ನೀತಿ ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸರ್‌ಎಂವಿ ಪ್ರತಿಮೆ ಎದುರಿನಿಂದ ಮೆರವಣಿಗೆ ಹೊರಟ ಕಾರ್ಯಕರ್ತರು, ರಾಜ್ಯ ಸರ್ಕಾರ ಹಾಗೂ ಸಚಿವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣದೊಳಕ್ಕೆ ಪ್ರವೇಶಿಸಲು ಮುಂದಾದಾಗ ಪೊಲೀಸರು ಗೇಟ್ ಮುಚ್ಚಿದರು. ಈ ವೇಳೆ ಗದ್ದಲದ ಪರಿಸ್ಥಿತಿ ಉಂಟಾಯಿತು. ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಿಸಿ ಹೊರಭಾಗಕ್ಕೆ ಕಳುಹಿಸಿದರು. ಆನಂತರ ಭತ್ತವನ್ನು ಸುರಿದು ಧಿಕ್ಕಾರದ ಘೋಷಣೆ ಕೂಗಿ ಅತಿ ತುರ್ತಾಗಿ ಭಕ್ತ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿದರು.

ರೈತರು ಜೂನ್ ಮತ್ತು ಜುಲೈನಲ್ಲಿ ನಾಟಿ ಮಾಡಿದ ಭತ್ತ ನವೆಂಬರ್‌ನಿಂದ ಕಟಾವು ಮಾಡುತ್ತಿದ್ದಾರೆ. ಈಗಾಗಲೇ ಭತ್ತದ ಕಟಾವು ಅಂತಿಮ ಹಂತಕ್ಕೆ ಬಂದಿದೆಯಾದರೂ ಸಹ ಭತ್ತದ ಖರೀದಿ ಕೇಂದ್ರವನ್ನು ತೆರೆದಿಲ್ಲ. ಇದರಿಂದ ಸಂಕಷ್ಟಕ್ಕೆ ಸಲುಕಿದ ರೈತ ಭತ್ತವನ್ನು ಮಾರಾಟ ಮಾಡುತ್ತಿದ್ದಾರೆ. ಪರಿಸ್ಥಿತಿ ದುರ್ಬಳಕೆ ಮಾಡಿಕೊಂಡ ದಳ್ಳಾಳಿಗಳು ಪ್ರತಿ ಕ್ವಿಂಟಾಲ್ ಭತ್ತವನ್ನು ಕೇವಲ 1,800 ರೂ.ಗೆ ಖರೀದಿ ಮಾಡುತ್ತಿದ್ದಾರೆ. ಕನಿಷ್ಟ ಬೆಂಬಲ ಬೆಲೆ 2,300 ರೂ ಇದ್ದರೂ ಸಹ ಕಡಿಮೆ ಬೆಲೆಗೆ ಖರೀದಿಸಿ ರೈತರನ್ನು ವಂಚಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸುಮಾರು 1,50,000 ಎಕರೆಯಲ್ಲಿ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ನಿಗದಿತ ಸಮಯದಲ್ಲಿ ಭತ್ತ ಖರೀದಿ ಕೇಂದ್ರ ತೆರೆಯದ ಹಿನ್ನೆಲೆಯಲ್ಲಿ ಪ್ರತಿ ಕ್ವಿಂಟಾಲ್ ಭತ್ತಕ್ಕೆ 1 ಸಾವಿರ ರೂ.ನಂತೆ ಜಿಲ್ಲೆಯ ರೈತರಿಗೆ 250 ಕೋಟಿ ರೂ ನಷ್ಟವಾಗಿದೆ ಎಂದು ಆರೋಪಿಸಿದರು.

ಜಿಲ್ಲೆಯವರೇ ಕೃಷಿ ಮಂತ್ರಿಯಾಗಿದ್ದರೂ ಖರೀದಿ ಕೇಂದ್ರ ತೆರೆಸಿಲ್ಲ. ಅಕಾಲಿಕ ಮಳೆಯಿಂದ ಭತ್ತ ಬೆಳೆಗಾರರು ನಷ್ಟಕೆ ಒಳಗಾಗಿರುವ ಸಂದರ್ಭದಲ್ಲಿ ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡಲಿಲ್ಲ. ಸರ್ಕಾರ ಈ ಕೂಡಲೇ ಭತ್ತದ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಲು ಮುಂದಾಗಬೇಕು. ತುರ್ತಾಗಿ ಭತ್ತ ಖರೀದಿ ಕೇಂದ್ರ ತೆರೆಯಬೇಕು. ಪ್ರತಿ ಕ್ವಿಂಟಾಲ್ ಭತ್ತಕ್ಕೆ 3 ಸಾವಿರ ರೂ ಬೆಂಬಲ ಬೆಲೆ ನಿಗದಿ ಮಾಡಬೇಕು. ಕೇರಳದ ಎಡರಂಗ ಸರ್ಕಾರದ ಮಾದರಿಯಲ್ಲಿ ಪ್ರತಿ ಎಕರೆಗೆ 10 ಸಾವಿರ ರೂ ಪ್ರೋತ್ಸಾಹ ಧನ, ಹೆಚ್ಚುವರಿಯಾಗಿ ಬೆಂಬಲ ಬೆಲೆಯ ಜತೆಗೆ ಕ್ವಿಂಟಾಲ್‌ಗೆ 700 ರೂ ನೀಡಬೇಕು. ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿ ಮಾಡುತ್ತಿರುವ ಖಾಸಗಿ ದಲ್ಲಾಳಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಮಳೆಹಾನಿಗೆ ಒಳಗಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಕುಮಾರ, ಭತ್ತ ಖರೀದಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈಗಾಗಲೇ ಭತ್ತ ಖರೀದಿ ಕೇಂದ್ರ ಗುರುತಿಸಲಾಗಿದೆ. ಶೀಘ್ರದಲ್ಲಿ ಕೇಂದ್ರ ತೆರೆದು ಭತ್ತ ಖರೀದಿ ಮಾಡಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್‌ರಾಜ್, ಸಹ ಸಂಚಾಲಕ ಎನ್.ಲಿಂಗರಾಜಮೂರ್ತಿ, ಮಹಾದೇವ, ಸತೀಶ್, ಕುಳ್ಳೇಗೌಡ, ಗುರುಸ್ವಾಮಿ, ಶ್ರೀನಿವಾಸ್, ರಾಮಣ್ಣ, ಎ.ಎಲ್.ಶಿವಕುಮಾರ್ ಇತರರಿದ್ದರು.