ಜಿಲ್ಲೆ

ನಿಜಕ್ಕೂ ಸತೀಶ ಜಾರಕಿಹೊಳಿ ಅಸಮಾಧಾನಕ್ಕೆ ಕಾರಣವೇನು, ಲಕ್ಷ್ಮಣ ಸವದಿಗೆ ಸಿಗುತ್ತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ?

ಬೆಂಗಳೂರು: ಸಚಿವ ಸತೀಶ ಜಾರಕಿಹೊಳಿ ತಮ್ಮ 20ಕ್ಕೂ ಹೆಚ್ಚು ಆಪ್ತ ಶಾಸಕರನ್ನು ಒಗ್ಗೂಡಿಸಿ ಮೈಸೂರು ಪ್ರವಾಸಕ್ಕೆ ಪ್ಲ್ಯಾನ್ ಮಾಡಿರುವ ಸುದ್ದಿ ಗಮನಕ್ಕೆ ಬರುತ್ತಿದ್ದಂತೆಯೇ ಕಾಂಗ್ರೆಸ್ ಹೈಕಮಾಂಡ್​ ಎಚ್ಚೆತ್ತುಕೊಂಡು ಬ್ರೇಕ್ ಹಾಕಿದೆ. ಸತೀಶ್ ಜಾರಕಿಹೊಳಿ ಈ ನಡೆ ಸದ್ಯ ರಾಜ್ಯ ಕಾಂಗ್ರೆಸ್​​ನಲ್ಲಿ ಕಂಪನ ಸೃಷ್ಟಿಸಿದ್ದು, ರಾಜ್ಯ ಘಟಕದ ಪುನರ್‌ಸಂಘಟನೆ ಹಾಗೂ ಕಾರ್ಯಾಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಪಕ್ಷ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಅವರ ಅಸಮಾಧಾನಕ್ಕೆ ಒಂದು ಕಾರಣ ಎಂದು ತಿಳಿದು ಬಂದಿದೆ.

ಶಕ್ತಿ ಪ್ರದರ್ಶನಕ್ಕೆ ಮುಂದಾದ ಸತೀಶ ಜಾರಕಿಹೊಳಿ
ಬಿಜೆಪಿಯಿಂದ ಕಾಂಗ್ರೆಸ್​​ಗೆ ಬಂದಿರುವ ಲಕ್ಷ್ಮಣ ಸವದಿ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಮಾಡುವ ಬಗ್ಗೆ ಕಾಂಗ್ರೆಸ್​​​ನಲ್ಲಿ ಚರ್ಚೆ ನಡೆದಿತ್ತು. ಇದರಿಂದ ಅಸಮಾಧಾನಗೊಂಡ ಸತೀಶ ಜಾರಕಿಹೊಳಿ ಅವರು ಶಾಸಕರನ್ನು ಒಟ್ಟುಗೂಡಿಸಿ ಪ್ರವಾಸ ಹೋಗುವ ಮೂಲಕ ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ತಮಗಿರುವ ಶಕ್ತಿ ಪ್ರದರ್ಶನಕ್ಕೆ ಮುಂದಾದರೆ ಎಂಬ ಚರ್ಚೆಯೂ ನಡೆದಿದೆ.

ಹೊಸ ಕಾರ್ಯಾಧ್ಯಕ್ಷರ ನೇಮಕ:ಶೀಘ್ರದಲ್ಲೇ ನಿರ್ಧಾರ
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಕೆಪಿಸಿಸಿಗೆ ಹೊಸ ಕಾರ್ಯಾಧ್ಯಕ್ಷರ ನೇಮಕ ಮಾಡುವ ನಿಟ್ಟಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ( ಸಂಘಟನೆ) ಕೆಸಿ ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಚರ್ಚೆ ನಡೆಸಿದ್ದಾರೆ. ಹೊಸ ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವ ನಿಟ್ಟಿನಲ್ಲಿ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಶೀಘ್ರದಲ್ಲೇ ಸಿಎಂ ಜತೆ ಚರ್ಚೆ
ಕೆಪಿಸಿಸಿಗೆ ಐವರು ಕಾರ್ಯಾಧ್ಯಕ್ಷರು ಇದ್ದಾರೆ. ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಈಶ್ವರ್ ಖಂಡ್ರೆ ಸಚಿವರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಸಲೀಂ ಅಹ್ಮದ್ ಹಾಗೂ ಬಿಎನ್ ಚಂದ್ರಪ್ಪ ಅವರು ಸದ್ಯ ಕಾರ್ಯಾಧ್ಯಕ್ಷರಾಗಿದ್ದು, ಈ ಐದು ಸ್ಥಾನಗಳನ್ನು ಬದಲಾವಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಈ ವಿಚಾರವಾಗಿ ಶೀಘ್ರದಲ್ಲೇ ಸಿಎಂ ಜತೆ ಚರ್ಚಿಸಿ ಎಐಸಿಸಿ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

ಲಕ್ಷ್ಮಣ ಸವದಿಗೆ ಸಿಗುತ್ತಾ ಸ್ಥಾನ?
ಲಿಂಗಾಯತರ ಖೋಟಾದಲ್ಲಿ ವಿನಯ್ ಕುಲಕರ್ಣಿ ಜೊತೆಗೆ ಲಕ್ಷ್ಮಣ ಸವದಿಯ ಹೆಸರೂ ಮುನ್ನಲೆಯಲ್ಲಿದೆ. ಆದರೆ ಸತೀಶ್ ಜಾರಕಿಹೊಳಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ವರಿಷ್ಠರು ಮಾತುಕತೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಸ್ಪಷ್ಟನೆ ಕೊಟ್ಟ ಸತೀಶ ಜಾರಕಿಹೊಳಿ
ಸರಕಾರ ಹಾಗೂ ಕಾಂಗ್ರೆಸ್​​​ನಲ್ಲಿ ಯಾವುದೇ ಬಣ ಇಲ್ಲ. ಇದು ಎಲ್ಲವೂ ಸೃಷ್ಟಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. ಸಮಾನ ಮನಸ್ಕ ಶಾಸಕರು ದಸರಾ ಆಚರಣೆಗಾಗಿ ಮೈಸೂರಿಗೆ ಹೋಗಬೇಕೆನ್ನುವ ಆಲೋಚನೆ ಇತ್ತು. ಈ ಸಂಬಂಧ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದು ಹೋಗುತ್ತೇವೆ. ಆದರೆ, ನಮ್ಮಲ್ಲಿ ಯಾವುದೇ ಬಣ ಇಲ್ಲ ಎಲ್ಲರೂ ಒಂದಾಗಿದ್ದೇವೆ ಎಂದು ನುಡಿದರು.

ವಿದೇಶಕ್ಕೆ ತೆರಳಲು ನಿರ್ಧಾರ? 
ಕೆಲವು ಶಾಸಕರ ಜೊತೆ ವಿದೇಶ ಪ್ರವಾಸ ಹೋಗಲು ಮುಂದಾಗಿರುವ ಸತೀಶ, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಆಪ್ತ ಕೆಲವು ಶಾಸಕರ ಜೊತೆ ದುಬೈಗೆ ಹೋಗಲು ಅವರು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.