ಜಿಲ್ಲೆ

ಗೆಲುವಿನ ಸನಿಹದಲ್ಲಿ ಕರ್ನಾಟಕ

ಹುಬ್ಬಳ್ಳಿ:ನಾಯಕ ಧೀರಜ್ ಗೌಡ ಭರ್ಜರಿ ಶತಕ(157ರನ್, 182ಎಸೆತ,22 ಬೌಂ., 1ಸಿ)ದ ನೆರವಿನಿಂದ ಆತಿಥೇಯ ಕರ್ನಾಟಕ, ಇಲ್ಲಿ ನಡೆಯುತ್ತಿರುವ 19 ವಯೋಮಿತಿಯ ಕೂಚ್ ಬೆಹಾರ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶದ ವಿರುದ್ಧ ಗೆಲುವಿನ ಸನಿಹಕ್ಕೆ ಬಂದಿದೆ.

ರಾಜನಗರ ಕೆಎಸ್​ಸಿಎ ಮೈದಾನದಲ್ಲಿ ಭಾನುವಾರ ಪಂದ್ಯದ 3ನೇ ದಿನದ ಅಂತ್ಯಕ್ಕೆ ಮಧ್ಯಪ್ರದೇಶ ದ್ವಿತೀಯ ಇನ್ನಿಂಗ್ಸ್​ನಲ್ಲಿ 7 ವಿಕೆಟ್ ಕಳೆದುಕೊಂಡು 113 ಗಳಿಸಿದೆ. ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಪ್ರವಾಸಿ ತಂಡ ಇನ್ನೂ 34 ರನ್ ಗಳಿಸಬೇಕು.

ಶನಿವಾರ ದಿನದ ಅಂತ್ಯಕ್ಕೆ 7 ವಿಕೆಟ್​ಗೆ 227 ರನ್ ಗಳಿಸಿದ್ದ ಕರ್ನಾಟಕದ ಪ್ರಥಮ ಇನ್ನಿಂಗ್ಸ್ ಇಂದು 416 ರನ್ ಮೊತ್ತಕ್ಕೆ ಕೊನೆಗೊಂಡಿತು. ನಾಯಕ ಧೀರಜ್ ಗೌಡ 7ನೇ ವಿಕೆಟ್​ಗೆ ಧ್ರುವ ಪ್ರಭಾಕರ ಜತೆ 86 ಹಾಗೂ 9ನೇ ವಿಕೆಟ್​ಗೆ ಸಮರ್ಥ ಎನ್. ಜತೆ 118 ರನ್​ಗಳ ಜೊತೆಯಾಟದಲ್ಲಿ ಭಾಗಿಯಾಗಿ ತಂಡದ ಮೊತ್ತವನ್ನು 400ರ ಗಡಿ ದಾಟಿಸಿದರು.

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ ದ್ರಾವಿಡ್ ಪುತ್ರ ಸಮಿತ ದ್ರಾವಿಡ್ ಆರಂಭದಲ್ಲಿಯೇ 3 ವಿಕೆಟ್ ಕಬಳಿಸಿ ಮಧ್ಯಪ್ರದೇಶ ತಂಡಕ್ಕೆ ದ್ವಿತೀಯ ಇನ್ನಿಂಗ್ಸ್​ನಲ್ಲಿ ಬಲವಾದ ಆಘಾತ ನೀಡಿದರು.

ಮಧ್ಯಪ್ರದೇಶ: 269 ಮತ್ತು 113ಕ್ಕೆ 7 (ಸಾರಂಶ ಸುರಾನಾ 45, ಅನ್ವೇಶ ಚಾವ್ಲಾ 24, ಧನಂಜಯ ದಿಕ್ಷೀತ 26ಅ, ಸಮಿತ ದ್ರಾವಿಡ 16ಕ್ಕೆ 3, ಹಾರ್ದಿಕ ರಾಜ 24ಕ್ಕೆ 2, ಸಮರ್ಥ ಎನ್. 14ಕ್ಕೆ 1, ಧೀರಜ್ ಗೌಡ 47ಕ್ಕೆ1).

ಕರ್ನಾಟಕ: 416 (ಧೀರಜ್ ಗೌಡ 157, ಧ್ರುವ ಪ್ರಭಾಕರ 54, ಸಮರ್ಥ ಎನ್. 18, ವಿಷ್ಣು ಬರದ್ವಾಜ್ 116ಕ್ಕೆ 7, ಅಭಿ ಅಗ್ನಿ 31ಕ್ಕೆ1).