ಜಿಲ್ಲೆ

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಪಟ್ಟು

reportermys

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ


ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಬಿಜೆಪಿಯಲ್ಲಿ ಮಾಡಿರುವ ಕೆಲಸ ಕಾರ್ಯ, ಸಂಘ- ಪರಿವಾರದ ಶ್ರೀರಕ್ಷೆ ಹಾಗೂ ಕೊಡವ ಭಾಷಿಕರಿಗೆ ಅವಕಾಶ ನೀಡಬೇಕೆಂಬ ನೆಲೆಗಟ್ಟಿಯಲ್ಲಿ ಅಧ್ಯಕ್ಷ ಸ್ಥಾನ ಪಡೆಯಲು ಪ್ರಯತ್ನ ನಡೆದಿದೆ.

ಸೋಮವಾರಪೇಟೆ ಕೊಡವ ಸಮಾಜ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್, ಅಮ್ಮತ್ತಿ ಕೊಡವ ಸಮಾಜ ಮಾಜಿ ಅಧ್ಯಕ್ಷ ಮೂಕೊಂಡ ಬೋಸ್ ದೇವಯ್ಯ, ಕೊಡವ ಹಾಕಿ ಅಕಾಡೆಮಿ ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ಕೊಡವ ಭಾಷಿಕ ಸಮುದಾಯಗಳ ಒಕ್ಕೂಟ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಈ ಪೈಕಿ ಮಾಳೇಟಿರ ಅಭಿಮನ್ಯುಕುಮಾರ್, ಮೂಕೊಂಡ ಬೋಸ್ ದೇವಯ್ಯ ಬಿಜೆಪಿ ನೆಲೆಗಟ್ಟಿನಲ್ಲಿ ಅಧ್ಯಕ್ಷ ಸ್ಥಾನ ಕೇಳುತ್ತಿದ್ದಾರೆ. ಸಂಘ ಪರಿವಾರದ ಹಿನ್ನೆಲೆ ಇಟ್ಟುಕೊಂಡು ಪ್ರಖ್ಯಾತ ವೀಕ್ಷಕ ವಿವರಣೆಗಾರ ಮಾಳೇಟಿರ ಶ್ರೀನಿವಾಸ್ ಪ್ರಯತ್ನಿಸುತ್ತಿದ್ದಾರೆ. ಕೊಡವ ಭಾಷಿಕರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ಡಾ.ಮೇಚಿರ ಸುಭಾಷ್ ನಾಣಯ್ಯ ಲಾಬಿ ನಡೆಸುತ್ತಿದ್ದಾರೆ.

ಕಳೆದ ಅವಧಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಹಾಗೂ ಶಾಸಕರು ಮಾಡಿದ ಶಿಫಾರಸ್ಸು ಬದಿಗಿಟ್ಟು ಅಚ್ಚರಿಕರ ರೀತಿಯಲ್ಲಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರನ್ನು ಆಯ್ಕೆ ಮಾಡು ವುದರ ಮೂಲಕ ಸರ್ಕಾರ ಅಚ್ಚರಿ ಮೂಡಿಸಿತ್ತು.

ಮಡಿಕೇರಿ ಶಾಸಕರು ಅಭಿಮನ್ಯಕುಮಾರ್‌ಗೆ, ವಿರಾಜಪೇಟೆ ಶಾಸಕರು ಬೋಸ್ ದೇವಯ್ಯ ಅವರಿಗೆ, ವಿಧಾನ ಪರಿಷತ್ ಸದಸ್ಯರು ಮಾಳೇಟಿರ ಶ್ರೀನಿವಾಸ್‌ಗೆ ಬೆಂಬಲ ನೀಡುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಬಿಜೆಪಿ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿದೆ.

ರಾಜಕೀಯ, ಪ್ರಭಾವ, ಲಾಬಿ ಬದಿಗಿಟ್ಟು ಕಳೆದ ಬಾರಿಯಂತೆ ಅಚ್ಚರಿ ಆಯ್ಕೆ ಈ ಬಾರಿಯೂ ಆಗಲಿದೆ ಎಂಬ ನಿರೀಕ್ಷೆ ಹಲವರಲ್ಲಿದೆ. ಅಕಾಡೆಮಿ ಚಟುವಟಿಕೆ ಸಮರ್ಥವಾಗಿ ಮುನ್ನಡೆಸಬಲ್ಲ ಅರ್ಹರನ್ನು ಗುರುತಿಸಿ ಅಧ್ಯಕ್ಷ ಪಟ್ಟ ನೀಡುವ ಬಗ್ಗೆಯೂ ಉನ್ನತಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

**
ಕಳೆದ ಬಾರಿ ಅಧ್ಯಕ್ಷ ಸ್ಥಾನಕ್ಕೆ ನಾನು ಮತ್ತು ರವಿ ಕಾಳಪ್ಪ ಆಕಾಂಕ್ಷಿಯಾಗಿದ್ದೇವು. ಕೊನೆ ಗಳಿಗೆಯಲ್ಲಿ ಇಬ್ಬರಿಗೂ ಸಿಗಲಿಲ್ಲ. ಈ ಬಾರಿ ರವಿ ಕಾಳಪ್ಪ ಅಕಾಂಕ್ಷಿ ಪಟ್ಟಿಯಲ್ಲಿ ಇಲ್ಲ. ಕೊಡವ ಸಾಹಿತ್ಯ. ಸಂಸ್ಕೃತಿ, ಸಂಘಟನೆಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದೇನೆ.
ಗರಗಂದೂರು, ಮಾದಾಪುರ, ಸೋಮವಾರಪೇಟೆಯಲ್ಲಿ ನಡೆದ ಕೊಡವ ಸಾಹಿತ್ಯ ಸಮ್ಮೇಳನದ ಸಂಚಾಲಕನಾಗಿ ಯಶಸ್ವಿಗೊಳಿಸಿದ ಅನುಭವವಿದೆ. ಭಾಷೆ, ಸಾಹಿತ್ಯ ಬೆಳವಣಿಗೆ ಹಾಗೂ ಹಕ್ಕುಗಳ ಒತ್ತಾಯಕ್ಕೆ ಪೂರಕವಾಗಿ ಕೆಲಸ ಮಾಡಿದ್ದೇನೆ. ಲಾಭಿ ಮಾಡುವುದಿಲ್ಲ. ಅಧ್ಯಕ್ಷ ಸ್ಥಾನ ದೊರೆತರೆ ಉತ್ತಮ ಕೆಲಸ ಮಾಡುತ್ತೇನೆ. ಮಾಳೇಟಿರ ಅಭಿಮನ್ಯುಕುಮಾರ್, ಅಧ್ಯಕ್ಷರು, ಸೋಮವಾರಪೇಟೆ ಕೊಡವ ಸಮಾಜ.

**
ಅಕಾಡೆಮಿ ಅಧ್ಯಕ್ಷ ಸ್ಥಾನ ನೀಡಿದ್ದಲ್ಲಿ ಜವಾಬ್ದಾರಿ ನಿರ್ವಹಿಸುತ್ತೇನೆ. ಬಿಜೆಪಿ ಹಿರಿಯ ಕಾರ್ಯಕರ್ತನಾಗಿ ಸಲ್ಲಿಸಿರುವ ಸೇವೆ ಪರಿಗಣಿಸಿ ಬಿಜೆಪಿ ಮುಖಂಡರು ನನ್ನನ್ನು ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸ್ಸು ಮಾಡಿದ್ದಾರೆ. ಎಲ್ಲರ ಆಶೀರ್ವಾದದಿಂದ ಅಧ್ಯಕ್ಷ ಸ್ಥಾನ ಸಿಕ್ಕಲ್ಲಿ ಸಮರ್ಥವಾಗಿ ಅಕಾಡೆಮಿ ಚಟುವಟಿಕೆ ನಿರ್ವಹಿಸುತ್ತೇನೆ. ಸಾಹಿತಿ ಅಲ್ಲದಿದ್ದರೂ ಸಾಹಿತಿಗಳು ಹಾಗೂ ಸಮಾಜದ ಸಹಕಾರದೊಂದಿಗೆ ಕೆಲಸ ಮಾಡುತ್ತೇನೆ. ಮೂಕೊಂಡ ಬೋಸ್ ದೇವಯ್ಯ, ಮಾಜಿ ಅಧ್ಯಕ್ಷರು, ಅಮ್ಮತ್ತಿ ಕೊಡವ ಸಮಾಜ.

**
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಿ ೨೫ ವರ್ಷ ಕಳೆದಿದೆ. ಕೊಡವ ಭಾಷಿಕ ೧೮ ಜನಾಂಗದವರಿದ್ದು, ಈ ಬಾರಿ ಕೊಡವ ಭಾಷಿಕರಿಗೆ ಅಧ್ಯಕ್ಷ ಸ್ಥಾನ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಅಧಿಕಾರಿಗಳ ಗಮನ ಸೆಳೆದಿದ್ದೇವೆ. ಜನಪ್ರತಿನಿಧಿಗಳು, ಪಕ್ಷ ಕ್ಕೆ ತಮ್ಮ ಬೇಡಿಕೆ ಸಲ್ಲಿಸಿಲ್ಲ. ಭಾಷಿಕ ಜನಾಂಗಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಅಧ್ಯಕ್ಷ ಸ್ಥಾನ ಕೇಳುತ್ತಿದ್ದೇನೆ. ಇಷ್ಟು ವರ್ಷ ಅಕಾಡೆಮಿ ಕಾರ್ಯ ಚಟುವಟಿಕೆಗೆ ಭಾಷಿಕರು ಪ್ರಾಮಾಣಿಕ ಸಹಕಾರ ನೀಡುತ್ತಾ ಬಂದಿದ್ದಾರೆ. ಡಾ.ಮೇಚಿರ ಸುಭಾಷ್ ನಾಣಯ್ಯ, ಅಧ್ಯಕ್ಷರು, ಕೊಡವ ಭಾಷಿಕ ಸಮುದಾಯಗಳ ಒಕ್ಕೂಟ.

**

ಕಳೆದ ಹಲವು ದಶಕದಿಂದ ಕೊಡವ ಸಂಸ್ಕೃತಿ, ಕಲೆ, ಆಚಾರ- ವಿಚಾರಕ್ಕೆ ಸಂಬಂಧಿಸಿದ್ದಂತೆ ವಿವಿಧ ಮಾಧ್ಯಮಗಳ ಮೂಲಕ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಅಕಾಡೆಮಿ ಅಧ್ಯಕ್ಷನಾಗುವಂತೆ ಸಂಘ ಪರಿವಾರದ ಮುಖಂಡರು ನನಗೆ ಸಂಪೂರ್ಣ ಒತ್ತಾಸೆ ನೀಡುತ್ತಿದ್ದಾರೆ. ಸಮುದಾಯದಿಂದಲ್ಲೂ ನಾನು ಅಧ್ಯಕ್ಷನಾಗುವುದಕ್ಕೆ ಒತ್ತಡ ಹೇರುತ್ತಿದ್ದಾರೆ. ಅಕಾಡೆಮಿ ಅಧ್ಯಕ್ಷನಾಗಿ ಸಮರ್ಥವಾಗಿ ಜವಾಬ್ದಾರಿ ನಿರ್ವ ಹಿಸುವ ಸಾಮರ್ಥ್ಯ ಹೊಂದಿದ್ದೇನೆ. ಮಾಳೇಟಿರ ಶ್ರೀನಿವಾಸ್, ಗೌರವ ಕಾರ್ಯದರ್ಶಿ, ಕೊಡವ ಹಾಕಿ ಅಕಾಡೆಮಿ.