ಜಿಲ್ಲೆ

ಮೈಕ್ರೋ ಫೈನಾನ್ಸ್‌ಗೆ ನಿರ್ಬಂಧ ವಿಧಿಸಲು ಆಗ್ರಹ: ಕರ್ನಾಟಕ ಜನಶಕ್ತಿ, ಮಹಿಳಾ ಮುನ್ನಡೆ ಕಾರ್ಯಕರ್ತೆಯರ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಮೈಕ್ರೋ ಫೈನಾನ್ಸ್‌ಗಳಿಗೆ ರಿಸರ್ವ್ ಬ್ಯಾಂಕ್ ನಿಯಮದಂತೆ ನಿರ್ಬಂಧ ವಿಧಿಸಬೇಕು ಹಾಗೂ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಕ್ಕೆ ಪರಿಹಾರ ನೀಡುವುದರ ಜತೆಗೆ ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ಜನಶಕ್ತಿ, ಮಹಿಳಾ ಮುನ್ನಡೆ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದರು.

ಮೈಕ್ರೋ ಫೈನಾನ್ಸ್‌ಗಳ ಸಾಲದ ಸುಳಿಗೆ ಸಿಲುಕಿ ಮಹಿಳೆಯರು ಮತ್ತು ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೆಚ್ಚಿನ ಬಡ್ಡಿ ಸುಲಿಗೆ, ಅಶ್ಲೀಲ ಪದ ಬಳಕೆ ,ಹಣ ವಸೂಲಾತಿಗಾಗಿ ರೌಡಿಗಳ ಬಲ ಪ್ರಯೋಗದಂತಹ ಕ್ರೌರ್ಯ ನಡೆಯುತ್ತಿವೆ. ಈ ಹಾವಳಿಯನ್ನು ತಪ್ಪಿಸಲು ರಾಜ್ಯಸರ್ಕಾರ ಸುಗ್ರಿವಾಜ್ಞೆಯನ್ನು ಹೊರಡಿಸಿ ಕಿರುಕುಳ ನೀಡಿದವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿ ಜಿಲ್ಲಾ ಕೇಂದ್ರದಲ್ಲಿ ಸಹಾಯವಾಣಿ ತೆರೆಯುವಂತೆ ಸೂಚಿಸಲಾಗಿದೆ. ಆದರೂ ಕಿರುಕುಳ ನಿಂತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಮರ್ಪಕವಾಗಿ ಜವಾಬ್ದಾರಿ ನಿರ್ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮೈಕ್ರೋ ಫೈನಾನ್ಸ್ ಸೇರಿದಂತೆ ಯಾವುದೇ ಬ್ಯಾಂಕಿಂಗ್ ವ್ಯವಸ್ಥೆಯ ಹಣಕಾಸಿನ ವ್ಯವಹಾರ ವಹಿವಾಟಿನ ಮೇಲೆ ನಿರ್ಬಂಧ ಮತ್ತು ನಿರ್ಣಾಯಕ ತೀರ್ಮಾನ ಮಾಡುವ ಹಕ್ಕು ಆರ್‌ಬಿಐಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಕಡಿವಾಣ ಹಾಕಬೇಕು. ಅನಿಯಂತ್ರಿತ ಠೇವಣಿ ಯೋಜನೆಯಡಿ ಅಧಿಕ ಬಡ್ಡಿ ಅಸೆ ತೋರಿಸಿ ಮಹಿಳೆಯರು ಮತ್ತು ಜನಸಾಮಾನ್ಯರಲ್ಲಿ ಕಂತಿನ ಮೂಲಕ ಹಣ ಕಟ್ಟಿಸಿಕೊಂಡು ವಂಚಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ 2004 ಮತ್ತು ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ 2019 ರ ಅಡಿಯಲ್ಲಿ ಸಕ್ಷಮ ಪ್ರಾಧಿಕಾರವನ್ನು ರಚನೆ ಮಾಡಿ ಅಧಿಕಾರಿಯನ್ನು ನೇಮಕ ಮಾಡಿ ಮೋಸ ಹೋದ ವರಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ಸ್ತ್ರೀ ಶಕ್ತಿ ಯೋಜನೆ ಬಗ್ಗೆ ಅರಿವು ಮೂಡಿಸಬೇಕು. ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳು ದೊರಕುವಂತೆ ಕ್ರಮ ಕೈಗೊಳ್ಳಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು. ಅತಿ ಹೆಚ್ಚು ತೆರಿಗೆ ವಿಧಿಸುವ ಪ್ರಕ್ರಿಯೆ ನಿಲ್ಲಬೇಕು. ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು. ಯುವಜನತೆಗೆ ಉದ್ಯೋಗಾವಕಾಶ ಹೆಚ್ಚಾಗಬೇಕು. ಗೃಹಲಕ್ಷ್ಮೀ ಯೋಜನೆ ಸಮರ್ಪಕವಾಗಿ ಜಾರಿಯಾಗಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಜನಶಕ್ತಿಯ ಪೂರ್ಣಿಮಾ, ಸಿದ್ದರಾಜು, ಮಹಿಳಾ ಮುನ್ನಡೆ ಕಮಲಾ, ಬಿ.ಎಸ್.ಶಿಲ್ಪಾ, ಲತಾ ಶಂಕರ್, ಪ್ರಿಯಾ ರಮೇಶ್, ಗಿರಿಜಾ, ಸುಮಾ ಇತರರಿದ್ದರು.